ಟ್ರಂಪ್ ಹೇಳಿಕೆಗಳ ಬಗ್ಗೆ ವಿದೇಶಿ ರಾಜತಾಂತ್ರಿಕರ ಆತಂಕ
Update: 2016-03-08 23:09 IST
ವಾಶಿಂಗ್ಟನ್, ಮಾ. 8: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಆಕಾಂಕ್ಷಿಯಾಗಿರುವ ಡೊನಾಲ್ಡ್ ಟ್ರಂಪ್ ನೀಡುತ್ತಿರುವ ‘‘ಪ್ರಚೋದನಕಾರಿ ಮತ್ತು ಅವಮಾನಕಾರಿ ಸಾರ್ವಜನಿಕ ಹೇಳಿಕೆ’’ಗಳ ಬಗ್ಗೆ ವಿದೇಶಿ ರಾಜತಾಂತ್ರಿಕರು ಅಮೆರಿಕದ ಸರಕಾರಿ ಅಧಿಕಾರಿಗಳ ಬಳಿ ಆತಂಕ ವ್ಯಕ್ತಪಡಿಸುತ್ತಿದ್ದಾರೆ ಎಂದು ಅಮೆರಿಕದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ವಿದೇಶೀಯರ ಬಗ್ಗೆ ಭೀತಿ ವ್ಯಕ್ತಪಡಿಸುವ ಮಾದರಿಯ ಟ್ರಂಪ್‌ರ ಹೇಳಿಕೆಗಳ ಬಗ್ಗೆ ಯುರೋಪ್, ಮಧ್ಯಪ್ರಾಚ್ಯ, ಲ್ಯಾಟಿನ್ ಅಮೆರಿಕ ಮತ್ತು ಏಶ್ಯಗಳ ರಾಜತಾಂತ್ರಿಕರು ಖಾಸಗಿ ಮಾತುಕತೆಗಳ ವೇಳೆ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ಅಮೆರಿಕದ ಮೂವರು ಅಧಿಕಾರಿಗಳು ಹೇಳಿದ್ದಾರೆ.
ಯಾವ ದೇಶದ ಅಧಿಕಾರಿಗಳು ಅತೃಪ್ತಿ ವ್ಯಕ್ತಪಡಿಸಿದ್ದಾರೆ ಎಂಬ ಪೂರ್ಣ ಪಟ್ಟಿಯನ್ನು ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರಾದರೂ, ಈ ಪಟ್ಟಿಯಲ್ಲಿ ಭಾರತ, ದಕ್ಷಿಣ ಕೊರಿಯ, ಜಪಾನ್ ಮತ್ತು ಮೆಕ್ಸಿಕೊಗಳು ಸೇರಿವೆ ಎಂಬುದನ್ನು ಅವರು ಖಚಿತಪಡಿಸಿದ್ದಾರೆ.