×
Ad

ಉತ್ತರ ಕೊರಿಯದ ವಿರುದ್ಧ ದ.ಕೊರಿಯ ಹೊಸ ದಿಗ್ಬಂಧನ

Update: 2016-03-08 23:13 IST

ಸಿಯೋಲ್ (ದಕ್ಷಿಣ ಕೊರಿಯ), ಮಾ. 8: ಉತ್ತರ ಕೊರಿಯದ ವಿರುದ್ಧ ದಕ್ಷಿಣ ಕೊರಿಯ ಮಂಗಳವಾರ ಹೊಸದಾಗಿ ಏಕಪಕ್ಷೀಯ ದಿಗ್ಬಂಧನವನ್ನು ವಿಧಿಸಿದೆ. ವಿದೇಶಗಳಲ್ಲಿರುವ ಉತ್ತರ ಕೊರಿಯದ ರೆಸ್ಟೋರೆಂಟ್‌ಗಳನ್ನು ಬಹಿಷ್ಕರಿಸುವಂತೆ ತನ್ನ ಪ್ರಜೆಗಳಿಗೆ ಕರೆ ನೀಡಿರುವುದು ದಕ್ಷಿಣ ಕೊರಿಯದ ದಿಗ್ಬಂಧನದಲ್ಲಿ ಒಳಗೊಂಡಿದೆ.
ಉತ್ತರ ಕೊರಿಯದ ಹಲವಾರು ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ದಕ್ಷಿಣ ಕೊರಿಯ ಹೊಸದಾಗಿ ಸಿದ್ಧಪಡಿಸಿದ ಕಪ್ಪು ಪಟ್ಟಿಯಲ್ಲಿ ಸೇರಿಸಿದೆ. ಅದೇ ರೀತಿ, ಈ ಹಿಂದೆ ಉತ್ತರ ಕೊರಿಯದ ಬಂದರುಗಳಲ್ಲಿ ನೆಲೆಸಿದ್ದ ಹಡಗುಗಳು ದಕ್ಷಿಣ ಕೊರಿಯದ ಜಲಪ್ರದೇಶವನ್ನು ಪ್ರವೇಶಿಸುವುದರ ಮೇಲೆ ನಿರ್ಬಂಧ ವಿಧಿಸಲಾಗಿದೆ.
ಕಳೆದ ವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ವಿಧಿಸಿದ ಕಠಿಣ ದಿಗ್ಬಂಧನದ ಬೆನ್ನಿಗೇ ದಕ್ಷಿಣ ಕೊರಿಯದ ನಿರ್ಬಂಧ ಹೊರಬಿದ್ದಿದೆ. ಉತ್ತರ ಮತ್ತು ದಕ್ಷಿಣ ಕೊರಿಯಗಳ ನಡುವೆ ಆರ್ಥಿಕ ಸಹಕಾರದ ಅನುಪಸ್ಥಿತಿಯ ಹಿನ್ನೆಲೆಯಲ್ಲಿ ಈ ದಿಗ್ಬಂಧನವು ಉತ್ತರ ಕೊರಿಯದ ಮೇಲೆ ಪರಿಣಾಮವನ್ನೇನೂ ಬೀರದಿದ್ದರೂ, ಉತ್ತರ ಕೊರಿಯ ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸುವುದು ಎಂದು ನಿರೀಕ್ಷಿಸಲಾಗಿದೆ.
ಉತ್ತರ ಕೊರಿಯದ ಭೂಪ್ರದೇಶದ ಒಳಗೆ ದಕ್ಷಿಣ ಮತ್ತು ಉತ್ತರ ಕೊರಿಯಗಳು ಜಂಟಿಯಾಗಿ ನಡೆಸುತ್ತಿದ್ದ ಕೇಸಾಂಗ್ ಕೈಗಾರಿಕಾ ಪ್ರದೇಶದ ಚಟುವಟಿಕೆಗಳನ್ನು ನಿಲ್ಲಿಸುವ ಅಭೂತಪೂರ್ವ ಕ್ರಮವೊಂದನ್ನು ದಕ್ಷಿಣ ಕೊರಿಯ ಕಳೆದ ತಿಂಗಳು ತೆಗೆದುಕೊಂಡಿರುವುದನ್ನು ಸ್ಮರಿಸಬಹುದಾಗಿದೆ.
ಉತ್ತರ ಕೊರಿಯ ಜನವರಿ ತಿಂಗಳಲ್ಲಿ ನಡೆಸಿದ ಪರಮಾಣು ಪರೀಕ್ಷೆ ಹಾಗೂ ಬಳಿಕ ನಡೆಸಿದ ಕ್ಷಿಪಣಿ ಪರೀಕ್ಷೆಯ ಹಿನ್ನೆಲೆಯಲ್ಲಿ ದಕ್ಷಿಣ ಕೊರಿಯ ಈ ಕ್ರಮಗಳನ್ನು ತೆಗೆದುಕೊಂಡಿದೆ.

ಉನ್ನತ ಅಧಿಕಾರಿಗಳ ಸ್ಮಾರ್ಟ್ ಫೋನ್‌ಗಳಿಗೆ ಕನ್ನ

ದಕ್ಷಿಣ ಕೊರಿಯದ ಹತ್ತಾರು ಉನ್ನತ ಸರಕಾರಿ ಅಧಿಕಾರಿಗಳ ಸ್ಮಾರ್ಟ್‌ಫೋನ್‌ಗಳಿಗೆ ಉತ್ತರ ಕೊರಿಯ ಕನ್ನ ಹಾಕಿದೆ ಎಂದು ದಕ್ಷಿಣ ಕೊರಿಯದ ಗುಪ್ತಚರ ಸಂಸ್ಥೆ ಮಂಗಳವಾರ ಆರೋಪಿಸಿದೆ. ಈ ಅಧಿಕಾರಿಗಳ ಫೋನ್‌ಗಳಲ್ಲಿದ್ದ ಅಕ್ಷರ ಮತ್ತು ಧ್ವನಿ ಸಂದೇಶಗಳು ಮತ್ತು ಫೋನ್ ಕರೆ ವಿವರಗಳನ್ನು ಕದಿಯಲಾಗಿದೆ ಎಂದು ಅದು ಹೇಳಿದೆ.
ಫೆಬ್ರವರಿ ಕೊನೆಯ ಭಾಗ ಮತ್ತು ಮಾರ್ಚ್ ತಿಂಗಳ ಮೊದಲ ಭಾಗದ ನಡುವಿನ ಅವಧಿಯಲ್ಲಿ ಸೈಬರ್‌ದಾಳಿಗಳನ್ನು ನಡೆಸಲಾಗಿದೆ ಎಂದು ರಾಷ್ಟ್ರೀಯ ಗುಪ್ತಚರ ಸೇವೆ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಅದೂ ಅಲ್ಲದೆ, ಈ ವರ್ಷದ ಆರಂಭದಲ್ಲಿ ದಕ್ಷಿಣ ಕೊರಿಯದ ರೈಲ್ವೆ ಅಧಿಕಾರಿಗಳ ಇಮೇಲ್ ಖಾತೆಗಳಿಗೂ ಕನ್ನ ಹಾಕಲು ಉತ್ತರ ಕೊರಿಯ ವಿಫಲ ಪ್ರಯತ್ನ ನಡೆಸಿತ್ತು ಎಂದು ಹೇಳಿಕೆ ತಿಳಿಸಿದೆ. ದಕ್ಷಿಣ ಕೊರಿಯದ ರೈಲ್ವೆ ಸಾರಿಗೆ ನಿಯಂತ್ರಣ ವ್ಯವಸ್ಥೆಯ ಮೇಲೆ ಸೈಬರ್ ದಾಳಿ ನಡೆಸುವುದಕ್ಕೆ ಸಿದ್ಧತೆಯಾಗಿ ಅದು ಈ ಪ್ರಯತ್ನ ನಡೆಸಿತ್ತು ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News