ಎಂಎಚ್370 ಪತ್ತೆಯಾಗುವ ವಿಶ್ವಾಸ: ಮಲೇಶ್ಯ ಪ್ರಧಾನಿ
ಕೌಲಾಲಂಪುರ, ಮಾ. 8: ನಿಗೂಢವಾಗಿ ನಾಪತ್ತೆಯಾಗಿರುವ ಮಲೇಶ್ಯನ್ ಏರ್‌ಲೈನ್ಸ್‌ನ ಎಂಎಚ್370 ವಿಮಾನ ಪತ್ತೆಯಾಗುವುದು ಎಂಬ ಬಗ್ಗೆ ತನಗೆ ಭರವಸೆಯಿದೆ ಎಂದು ಮಲೇಶ್ಯದ ಪ್ರಧಾನಿ ನಜೀಬ್ ರಝಾಕ್ ಹೇಳಿದ್ದಾರೆ.
ವಿಮಾನ ನಾಪತ್ತೆಯಾಗಿ ಎರಡು ವರ್ಷಗಳು ಪೂರ್ಣಗೊಂಡ ಸಂದರ್ಭದಲ್ಲಿ ಅವರು ಈ ಸಂಬಂಧ ಪತ್ರಿಕಾ ಹೇಳಿಕೆಯೊಂದನ್ನು ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಮಲೇಶ್ಯ ಸಂಸತ್ತಿನಲ್ಲಿ ಸಂಸದರು ಮಂಗಳವಾರ ವಿಮಾನದ ನಾಪತ್ತೆಯಾದ ಪ್ರಯಾಣಿಕರಿಗಾಗಿ ವೌನ ಪ್ರಾರ್ಥನೆ ನಡೆಸಿದರು.
ಫ್ರಾನ್ಸ್‌ನ ರೀಯೂನಿಯನ್ ದ್ವೀಪದಲ್ಲಿ ಕಳೆದ ವರ್ಷದ ಜುಲೈಯಲ್ಲಿ ವಿಮಾನದ ರೆಕ್ಕೆಯ ಭಾಗ ಪತ್ತೆಯಾಗಿರುವುದು ವಿಮಾನ ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಪತನಗೊಂಡಿದೆ ಎಂಬುದರ ಸೂಚನೆಯಾಗಿದೆ ಎಂದು ನಜೀಬ್ ಅಭಿಪ್ರಾಯಪಟ್ಟರು.
ಈಗ ನಡೆಯುತ್ತಿರುವ ತನಿಖೆ ಈ ವರ್ಷದ ಉತ್ತರಾರ್ಧದಲ್ಲಿ ಪೂರ್ಣಗೊಳ್ಳುತ್ತದೆಂದು ನಿರೀಕ್ಷಿಸಲಾಗಿದೆ ಹಾಗೂ ವಿಮಾನ ಪತ್ತೆಯಾಗುವುದು ಎಂಬ ಬಗ್ಗೆ ಮಲೇಶ್ಯ ಆಶಾವಾದವನ್ನು ಹೊಂದಿದೆ ಎಂದು ಅವರು ಹೇಳಿದರು.
ಶೋಧದಲ್ಲಿ ಏನೂ ಪತ್ತೆಯಾಗದಿದ್ದರೆ, ಮುಂದಿನ ದಾರಿಯ ಬಗ್ಗೆ ಮಲೇಶ್ಯ, ಆಸ್ಟ್ರೇಲಿಯ ಮತ್ತು ಚೀನಾಗಳು ಸಭೆಯೊಂದನ್ನು ನಡೆಸುವುದು ಎಂದರು.
239 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತು 2014 ಮಾರ್ಚ್ 8ರಂದು ಕೌಲಾಲಂಪುರದಿಂದ ಚೀನಾದ ರಾಜಧಾನಿ ಬೀಜಿಂಗ್‌ಗೆ ಹಾರುತ್ತಿದ್ದ ಮಲೇಶ್ಯನ್ ಏರ್‌ಲೈನ್ಸ್‌ನ ಎಂಎಚ್370 ವಿಮಾನ ಹಾರಾಟ ಆರಂಭಿಸಿದ ಸ್ವಲ್ಪವೇ ಹೊತ್ತಿನಲ್ಲಿ ನಾಪತ್ತೆಯಾಗಿತ್ತು.
ಅದು ಹಿಂದೂ ಮಹಾ ಸಾಗರದಲ್ಲಿ ಪತನಗೊಂಡಿರಬೇಕು ಎಂದು ಭಾವಿಸಿ, ನಂತರದ ದಿನಗಳು ಮತ್ತು ತಿಂಗಳುಗಳಲ್ಲಿ ಸಮುದ್ರವನ್ನು ಜಾಲಾಡಲಾಯಿತಾದರೂ ವಿಮಾನದ ಅವಶೇಷಗಳು ಪತ್ತೆಯಾಗಿಲ್ಲ.