×
Ad

ಭಾರತ ತೊರೆಯದಂತೆ ಮಲ್ಯಗೆ ತಡೆ: 13 ಬ್ಯಾಂಕ್‌ಗಳ ಮನವಿ

Update: 2016-03-08 23:20 IST

ಹೊಸದಿಲ್ಲಿ, ಮಾ.8: ಸಾಲದ ಸುಳಿಯಲ್ಲಿ ಸಿಲುಕಿರುವ ವಿಜಯ್‌ಮಲ್ಯಗೆ ಈಗ ಇನ್ನೊಂದು ಸಂಕಷ್ಟ ಎದುರಾಗಿದೆ. ಭಾರತವನ್ನು ತೊರೆಯದಂತೆ ಮಲ್ಯಗೆ ಆದೇಶ ನೀಡಬೇಕೆಂದು ಕೋರಿ 13 ಬ್ಯಾಂಕುಗಳು ಸಲ್ಲಿಸಿದ ಮನವಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ಮಂಗಳವಾರ ಸಮ್ಮತಿಸಿದೆ. ಈ ನ್ಯಾಯಾಲಯಗಳು ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದ್ದವು. ಈ ಬ್ಯಾಂಕ್‌ಗಳು 13 ಸಾವಿರ ಕೋಟಿ ರೂ.ಗೂ ಅಧಿಕ ಮೊತ್ತದ ಸಾಲವನ್ನು ಮಲ್ಯ ಮಾಲಕತ್ವದ ಕಿಂಗ್‌ಫಿಶರ್ ಏರ್‌ಲೈನ್ಸ್ ಕಂಪೆನಿಗೆ ನೀಡಿದ್ದವು.
    ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಹಾಗೂ ಯು.ಯು.ಲಲಿತ್ ಅವರನ್ನೊಳಗೊಂಡ ನ್ಯಾಯಪೀಠವು ಮನವಿಯನ್ನು ಬುಧವಾರ ಆಲಿಸಲು ಒಪ್ಪಿಕೊಂಡಿದೆ. ಸ್ಟೇಟ್‌ಬ್ಯಾಂಕ್ ಸೇರಿದಂತೆ 13 ಬ್ಯಾಂಕ್‌ಗಳ ಪರವಾಗಿ ಅಟಾರ್ನಿ ಜನರಲ್ ಮುಕುಲ್‌ರೋಹಟಗಿ, ವಿಷಯದ ತುರ್ತು ಆಲಿಕೆಗಾಗಿ ನ್ಯಾಯಾಲಯವನ್ನು ಕೋರಿದ್ದರು.

 ವಿಜಯ್‌ಮಲ್ಯ ದೇಶ ಬಿಟ್ಟು ತೆರಳದಂತೆ ಮಧ್ಯಾಂತರ ಆದೇಶವನ್ನು ಹೊರಡಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದ್ದನ್ನು ಪ್ರಶ್ನಿಸಿ ಬ್ಯಾಂಕ್‌ಗಳು ಸುಪ್ರೀಂಕೋರ್ಟ್ ಮೊರೆ ಹೋಗಿದ್ದವು.ತಮ್ಮ ಹಣಕಾಸು ಹಿತಾಸಕ್ತಿಗಳನ್ನು ರಕ್ಷಿಸುವ ಉದ್ದೇಶದಿಂದ ಕರ್ನಾಟಕ ಹೈಕೋರ್ಟ್, ಮಲ್ಯ ವಿರುದ್ಧ ಮಧ್ಯಾಂತರ ಆದೇಶ ಹೊರಡಿಸಬೇಕಿತ್ತೆಂದು ಬ್ಯಾಂಕುಗಳು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದವು.
ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವ ಮುನ್ನ ಬ್ಯಾಂಕ್‌ಗಳು, ಬೆಂಗಳೂರಿನ ಸಾಲವಸೂಲಾತಿ ಪ್ರಾಧಿಕಾರ (ಡಿಆರ್‌ಟಿ)ದ ಮುಂದೆ ನಾಲ್ಕು ಮನವಿಗಳನ್ನು ಸಲ್ಲಿಸಿ, ಮಲ್ಯ ಅವರ ಪಾಸ್‌ಪೋರ್ಟ್ ಮುಟ್ಟುಗೋಲಿಗೆ ಹಾಗೂ ಅವರ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಬೇಕೆಂದು ಕೋರಿದ್ದವು.ಅವರಿಗೆ ಡಿಯಾಜಿಯೊ ಪಿಎಲ್‌ಸಿಯಿಂದ ಬರಬೇಕಾಗಿದ್ದ 75 ದಶಲಕ್ಷ ಡಾಲರ್‌ಗಳನ್ನು ತಡೆಹಿಡಿಯುವಂತೆ ಅವು ನ್ಯಾಯಾಲಯವನ್ನು ಆಗ್ರಹಿಸಿದ್ದವು. ಮಲ್ಯ ತನ್ನ ಆಸ್ತಿ ವಿವರಗಳನ್ನು ಬಹಿರಂಗಪಡಿಸುವಂತೆ ಆದೇಶ ನೀಡಬೇಕೆಂದು ಅವು ಪ್ರಾಧಿಕಾರವನ್ನು ಒತ್ತಾಯಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News