ಕೇರಳ ಲಾಟರಿಯ ಒಂದು ಕೋಟಿ ರೂ. ಬಹುಮಾನ ಗೆದ್ದ ಬಂಗಾಳಿ ಬಾಬು: ಇತರರ ಭಯದಿಂದ ಪೊಲೀಸ್ ಠಾಣೆಯಲ್ಲಿ ಆಶ್ರಯ ಪಡೆದ!
ಕೋಝಿಕ್ಕೋಡ್, ಮಾ. 9: ಕೇರಳ ಸರಕಾರದ ಕಾರುಣ್ಯ ಲಾಟರಿಯ ಪ್ರಥಮ ಬಹುಮಾನ ಬಂಗಾಲಿಯೊಬ್ಬನಿಗೆ ದೊರಕಿದೆ. ಒಂದು ಕೋಟಿ ರೂ. ಮೊತ್ತದ ಲಾಟರಿ ಬಹುಮಾನ ಗೆದ್ದ ಬಂಗಾಳಿ ಯುವಕ ಜೀವ ಭಯದಲ್ಲಿ ನಡುಗುತ್ತಿದ್ದಾನೆ.
ತನ್ನನ್ನು ಯಾರಾದರೂ ಆಕ್ರಮಿಸಿದರೆ ಎಂಬ ಬೆದರಿಕ ಅವನಲ್ಲಿ ಮನೆಮಾಡಿದೆ. ಎರಡು ದಿವಸಗಳಿಂದ ಪೊಲೀಸ್ ಠಾಣೆಯಲ್ಲಿ ಅತಿಥಿಯಾಗಿ ಉಳಿದಿದ್ದಾನೆ. ಕಟ್ಟಡ ಕಾರ್ಮಿಕನಾದ ಆತ ಕಳೆದ ಬುಧವಾರ ಕೇರಳಕ್ಕೆ ಬಂದಿದ್ದ.
ಬಂಗಾಳದ ಬರ್‌ದ್ವಾನ್ ಜಿಲ್ಲೆಯ ಮೊಫೀರ್ ರಹೀಮ್ ಶೇಖ್ (22) ಕೇರಳ ಸರಕಾರದ ಕಾರುಣ್ಯ ಲಾಟರಿಯಲ್ಲಿ ಬಂಪರ್ ಬಹುಮಾನ ಲಭಿಸಿ ಕೋಟ್ಯಧಿಪತಿಯಾಗಿದ್ದಾನೆ. ಮನೆಮಂದಿ ತೀರ ಬಡವರು. ಹಸಿವು ನಿತ್ಯ ಅವರ ಸಂಗಾತಿ. ಈ ಹಿನ್ನೆಲೆಯಿಂದ ಆತ ಕೆಲಸ ಹುಡುಕುತ್ತ ಕೇರಳಕ್ಕೆ ಬಂದಿದ್ದ.
ಕೇರಳ ರಾಜ್ಯ ಸರಕಾರದ ಒಂದು ಲಾಟರಿ ಟಿಕೇಟು ಖರೀದಿಸಿ ಅದೃಷ್ಟ ಪರೀಕ್ಷಿಸಿದ್ದ ಅವನಿಗೆ ಬಂಪರ್ ಬಹುಮಾನವನ್ನೇ ಲಾಟರಿ ತಂದು ಕೊಟ್ಟಿದೆ. ಕೆ.ಟಿ.215092 ಸಂಖ್ಯೆಗೆ ಒಂದು ಕೋಟಿ ಬಹುಮಾನ ಲಭಿಸಿದೆ. ಮೊನ್ನೆ ಬಂಗಾಳದಿಂದ ಬಂದಿದ್ದ ಆತ ನಿನ್ನೆ ಕೆಲಸಕ್ಕೆ ಹೊಗಿ ಬರುವಾಗ ಸಿಕ್ಕಿದ ಸಂಬಳದಿಂದ ಒಂದು ಲಾಟರಿ ಟಿಕೇಟ್ ಖರೀದಿಸಿದ್ದ. ಅದರಲ್ಲಿ ಅವನಿಗೆ ಅದೃಷ್ಟ ಒಲಿಯಿತು.
ವಾಸಿಸುವ ಕೋಣೆಯಿಂದ ಹೊರಗಿಳಿಯಲು. ಒಬ್ಬನೇ ಕುಳಿತುಕೊಳ್ಳಲು ಹೆದರುತ್ತಿದ್ದ ಅವನನ್ನು ಗೆಳೆಯರು ಪೊಲೀಸ್ ಠಾಣೆಗೆ ಕರೆತಂದಿದ್ದರು. ಪೊಯವೂರ್ ಎಸ್ಸೈ ವಿಷಯ ತಿಳಿದು ಟಿಕೆಟ್ ಪರಿಶೀಲಿಸಿದಾಗ ಕಾರಣ್ಯ ಲಾಟರಿಯ ಪ್ರಥಮ ಸ್ಥಾನ ಅವನಿಗೆ ಲಭಿಸಿದ್ದು ಮನವರಿಕೆಯಾಗಿತ್ತು. ಆನಂತರ ಅವನನ್ನು ಪೊಲೀಸ್ ಸ್ಟೇಶನ್‌ನಲ್ಲಿಯೇ ಇರಿಸಿದ ಪೊಲೀಸಧಿಕಾರಿ ನಿನ್ನೆ ಬ್ಯಾಂಕ್ ತೆರೆದ ಬಳಿಕ ಎಸ್‌ಬಿಐ ಶಾಖೆಗೆ ಪೊಲೀಸ್‌ರ ಉಪಸ್ಥಿತಿಯಲ್ಲಿ ಲಾಟರಿ ಟಿಕೆಟನ್ನು ಹಸ್ತಾಂತರಿಸಿದ್ದಾನೆ.
ದೊಡ್ಡ ಮನೆ ಕಟ್ಟಿಸಬೇಕು ಒಳ್ಳೆಯ ಆಹಾರಕ್ಕೂ ಆತ ಬಯಸುತ್ತಿದ್ದಾನೆ. ಮೊಫೀರ್ ರಹೀಮ್ ಶೇಖ್ನ ಮನೆಯವರು ಬಂಗಾಲದಿಂದ ಇಲ್ಲಿಗೆ ಬಂದಿದ್ದಾರೆ. ಕೋಟ್ಯಧಿಪತಿಯಾದ ಸುದ್ದಿ ಮನೆಯವರಿಗೆ ತಿಳಿಸಿದಾಗ ಅಪ್ಪ ಅಮ್ಮ ಪತ್ನಿ ಅಳತೊಡಗಿದರೆಂದು ಮೊಫೀರ್ ರಹೀಮ್ ಹೇಳುತ್ತಾನೆ. ಆತನಿಗೆ ಹತ್ತು ತಿಂಗಳ ಹೆಣ್ಣು ಮಗುವೊಂದಿದೆ.