ವಿಮಾನದಲ್ಲಿ ‘‘ದುರುಗುಟ್ಟಿ ನೋಡಿದುದಕ್ಕಾಗಿ’’ ಮುಸ್ಲಿಂ ಮಹಿಳೆಯರ ವಿಚಾರಣೆ!
ಲಾಸ್ ಏಂಜಲಿಸ್, ಮಾ. 9: ಇಬ್ಬರು ಮುಸ್ಲಿಂ ಮಹಿಳೆಯರು ಗಗನಸಖಿಯನ್ನು ‘‘ದುರುಗುಟ್ಟಿ ನೋಡಿದುದಕ್ಕಾಗಿ’’ ಅವರನ್ನು ಪೊಲೀಸರು ವಿಮಾನದಿಂದ ಕೆಳಗಿಳಿಸಿದ ಆಘಾತಕಾರಿ ಘಟನೆಯೊಂದು ವರದಿಯಾಗಿದೆ.
ಈ ಇಬ್ಬರು ಮಹಿಳೆಯರು ಜೆಟ್‌ಬ್ಲೂ ವಿಮಾನದಲ್ಲಿ ಅಮೆರಿಕದ ಬೋಸ್ಟನ್‌ನಿಂದ ಲಾಸ್ ಏಂಜಲಿಸ್‌ಗೆ ಪ್ರಯಾಣಿಸುತ್ತಿದ್ದರು. ಈ ಮಹಿಳೆಯರು ತನ್ನನ್ನು ‘‘ದುರುಗುಟ್ಟಿಕೊಂಡು ನೋಡಿರುವುದು’’ ತನಗೆ ಸರಿ ಕಾಣಲಿಲ್ಲ ಎಂಬುದಾಗಿ ಗಗನಸಖಿ ತನ್ನ ಸಹೋದ್ಯೋಗಿಗೆ ಹೇಳುವುದನ್ನು ಕೇಳಿಸಿಕೊಂಡೆವು ಎಂಬುದಾಗಿ ಪ್ರಯಾಣಿಕರು ಹೇಳಿದ್ದಾರೆ ಎಂದು ‘ದ ಸನ್’ ವರದಿ ಮಾಡಿದೆ.
ಬಳಿಕ ಲಾಸ್ ಏಂಜಲಿಸ್‌ನಲ್ಲಿ ವಿಮಾನ ಇಳಿದಾಗ, ಅಧಿಕಾರಿಗಳು ವಿಮಾನದೊಳಕ್ಕೆ ಬರುತ್ತಿದ್ದಾರೆ, ಸೀಟ್‌ಬೆಲ್ಟ್‌ಗಳನ್ನು ಕಟ್ಟಿಕೊಂಡು ನಿಮ್ಮ ನಿಮ್ಮ ಸೀಟ್‌ಗಳಲ್ಲಿಯೇ ಇರಿ ಎಂಬುದಾಗಿ ಗಗನಸಖಿ ಘೋಷಿಸಿದರು ಎಂದು ವಿಮಾನದ ಪ್ರಯಾಣಿಕೆ ಶರೋನ್ ಕೆಸ್ಲರ್ ಹೇಳಿದರು.
‘‘ಅದೊಂದು ಭಯಾನಕ ಘಟನೆ. ಈ ಮಹಿಳೆಯರು ನಿಜವಾಗಿಯೂ ವೌನವಾಗಿ ಕುಳಿತು ಚಿತ್ರಗಳನ್ನು ವೀಕ್ಷಿಸುತ್ತಿದ್ದರು. ಈ ಗಗನಸಖಿಯಾದು ಅತಿಯಾಯಿತು’’ ಎಂಬುದಾಗಿ ಕೆಸ್ಲರ್ ತನ್ನ ಫೇಸ್‌ಬುಕ್ ಪುಟದಲ್ಲಿ ಬರೆದಿದ್ದಾರೆ.
‘‘ಓರ್ವ ಮಹಿಳೆ ವಿಮಾನದೊಳಗಿನ ವಿದ್ಯಮಾನಗಳನ್ನು ಚಿತ್ರಿಸುತ್ತಿದ್ದಾರೆ ಎಂಬ ಭಾವನೆ ಓರ್ವ ಗಗನಸಖಿಗೆ ಬಂದಿದೆ. ಹಾಗಾಗಿ, ಅವರು ಅದನ್ನು ವರದಿ ಮಾಡಿದ್ದಾರೆ. ಸುರಕ್ಷತೆಯ ಮಾನದಂಡಗಳಿಗೆ ಅನುಗುಣವಾಗಿಯೇ ಅವರು ಕೆಲಸ ಮಾಡಿದ್ದಾರೆ. ಅನಾನುಕೂಲಕ್ಕೆ ವಿಷಾದಿಸುತ್ತೇವೆ’’ ಎಂದು ಹೇಳಿಕೆಯೊಂದರಲ್ಲಿ ಜೆಟ್‌ಬ್ಲೂ ತಿಳಿಸಿದೆ.