ಮಲ್ಯ ವಿದೇಶಕ್ಕೆ ಪಲಾಯನ!
ಮಾ.2ರಂದೇ ಪರಾರಿ: ಕೇಂದ್ರದಿಂದ ಸುಪ್ರೀಂಗೆ ಮಾಹಿತಿ
ವಿದೇಶದಲ್ಲಿದ್ದರೂ 2 ವಾರಗಳಲ್ಲಿ ಉತ್ತರಿಸಿ: ವಿಜಯ ಮಲ್ಯಗೆ ಸುಪ್ರೀಂಕೋರ್ಟ್ ನೋಟಿಸ್
ಹೊಸದಿಲ್ಲಿ,ಮಾ.9: ವಿವಿಧ ಬ್ಯಾಂಕ್‌ಗಳಿಂದ 9 ಸಾವಿರ ಕೋಟಿ ರೂ.ಗೂ ಅಧಿಕ ಸಾಲದ ಸುಳಿಯಲ್ಲಿ ಸಿಲುಕಿಕೊಂಡಿರುವ ಮದ್ಯದೊರೆ ವಿಜಯ ಮಲ್ಯ ಒಂದು ವಾರದ ಹಿಂದೆಯೇ ದೇಶವನ್ನು ತೊರೆದಿದ್ದಾರೆಂಬ ಸ್ಫೋಟಕ ಮಾಹಿತಿಯನ್ನು ಕೇಂದ್ರ ಸರಕಾರವು ಬುಧವಾರ ಸುಪ್ರೀಂಕೋರ್ಟ್‌ಗೆ ಬಹಿರಂಗಪಡಿಸಿದೆ.
ಕೇಂದ್ರ ಸರಕಾರದ ಅಟಾರ್ನಿ ಜನರಲ್ ಮುಕುಲ್ ರೋಹಟಗಿ, ನ್ಯಾಯಮೂರ್ತಿಗಳಾದ ಕುರಿಯನ್ ಜೋಸೆಫ್ ಹಾಗೂ ಆರ್.ಎಫ್.ನಾರಿಮನ್ ಅವರನ್ನೊಳಗೊಂಡ ನ್ಯಾಯಪೀಠಕ್ಕೆ ಈ ವಿಷಯ ತಿಳಿಸಿದ್ದಾರೆ. ‘‘ನಾನು ಸ್ವಲ್ಪ ಸಮಯದ ಮುಂಚೆ ಸಿಬಿಐ ಜೊತೆ ಮಾತನಾಡಿದ್ದೇನೆ. ಮಲ್ಯ ಅವರು ಮಾರ್ಚ್ 2ರಂದು ದೇಶವನ್ನು ತೊರೆದಿದ್ದಾರೆಂದು ಅದು ನನಗೆ ತಿಳಿಸಿದೆ’’ ಎಂದವರು ನ್ಯಾಯಾಲಯಕ್ಕೆ ತಿಳಿಸಿದರು.
ತಮಗೆ 9 ಸಾವಿರ ಕೋಟಿ ರೂ.ಗೂ ಅಧಿಕ ಸಾಲವನ್ನು ಬಾಕಿಯುಳಿಸಿಕೊಂಡಿರುವ ವಿಜಯ ಮಲ್ಯ ದೇಶಬಿಟ್ಟು ತೆರಳದಂತೆ ಮಾಡಲು ಅವರ ಪಾಸ್‌ಪೋರ್ಟ್ ಮುಟ್ಟುಗೋಲು ಹಾಕಬೇಕು ಮತ್ತು ಸುಪ್ರೀಂಕೋರ್ಟ್‌ಗೆ ಹಾಜರಾಗುವಂತೆ ಅವರಿಗೆ ಆದೇಶ ನೀಡಬೇಕೆಂದು ಕೋರಿ ಬ್ಯಾಂಕ್‌ಗಳ ಒಕ್ಕೂಟವು ಸುಪ್ರೀಂಕೋಟ್‌ಗೆ ಮನವಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಪೀಠವು ಮಲ್ಯಗೆ ನೋಟಿಸ್ ಜಾರಿಗೊಳಿಸಿ, ಎರಡು ವಾರಗಳೊಳಗೆ ಉತ್ತರಿಸುವಂತೆ ತಿಳಿಸಿದೆ. ವಿವಿಧ ಬ್ಯಾಂಕ್‌ಗಳಿಗೆ ಮಲ್ಯ ಅವರು 9 ಸಾವಿರ ಕೋಟಿ ರೂ.ಗೂ ಅಧಿಕ ಸಾಲವನ್ನು ಬಾಕಿಯಿರಿಸಿದ್ದು, ಒಂದಲ್ಲ ಒಂದು ನೆಪ ಹೇಳಿ ಅವರು ಅದನ್ನು ತೀರಿಸುತ್ತಿಲ್ಲವೆಂದು ಅಟಾರ್ನಿ ಜನರಲ್ ಆಲಿಕೆಯ ವೇಳೆ ತಿಳಿಸಿದರು. ಬೆಂಗಳೂರು ಹಾಗೂ ಗೋವಾಗಳಲ್ಲಿರುವ ವಿವಿಧ ಸಾಲವಸೂಲಾತಿ ನ್ಯಾಯಾಧೀಕರಣಗಳಲ್ಲಿಯೂ ಅವರ ವಿರುದ್ಧ ಕಾನೂನುಕಲಾಪಗಳು ನಡೆಯುತ್ತಿದೆಯೆಂದು ಎಜಿ ತಿಳಿಸಿದರು.
ಮಲ್ಯ ಅವರು ದೇಶ, ವಿದೇಶಗಳಲ್ಲಿಯೂ ಸ್ಥಿರ,ಚರಾಸ್ತಿಗಳನ್ನು ಹೊಂದಿದ್ದು, ಅವುಗಳ ವೌಲ್ಯವು ಅವರು ಈ ದೇಶದಲ್ಲಿ ಪಡೆದಿರುವ ಸಾಲದ ಮೊತ್ತಕ್ಕಿಂತಲೂ ಬಹುಪಟ್ಟು ಅಧಿಕವಾಗಿದೆಯೆಂದು ಎಜಿ ನ್ಯಾಯಪೀಠಕ್ಕೆ ತಿಳಿಸಿದರು.
ಮಲ್ಯ ಈಗಾಗಲೇ ದೇಶ ಬಿಟ್ಟು ತೆರಳಿದ್ದಾರೆಂಬ ಮಾಹಿತಿಯನ್ನು ಪಡೆದ ನ್ಯಾಯಾಲಯವು ಅವರ ರಾಜ್ಯಸಭಾ ಸದಸ್ಯತ್ವದ ಇಮೇಲ್ ವಿಳಾಸ, ಲಂಡನ್‌ನಲ್ಲಿರುವ ಭಾರತೀಯ ಹೈಕಮೀಶನ್,ವಿವಿಧ ಹೈಕೋರ್ಟ್‌ಗಳಲ್ಲಿ ಅವರನ್ನು ಪ್ರತಿನಿಧಿಸುವ ನ್ಯಾಯವಾದಿಗಳು, ಸಾಲ ವಸೂಲಾತಿ ಟ್ರಿಬ್ಯೂನಲ್ ಹಾಗೂ ಅವರ ಮಾಲಕತ್ವದ ಕಂಪೆನಿಯ ಮೂಲಕವೂ ನೋಟಿಸ್ ಜಾರಿಗೊಳಿಸಲು ಆದೇಶಿಸಿತು.
ವಿಜಯ್‌ಮಲ್ಯ ದೇಶ ಬಿಟ್ಟು ತೆರಳದಂತೆ ಮಧ್ಯಾಂತರ ಆದೇಶವನ್ನು ಹೊರಡಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದ್ದನ್ನು ಪ್ರಶ್ನಿಸಿ ಬ್ಯಾಂಕ್‌ಗಳು ಸುಪ್ರೀಂಕೋರ್ಟ್ ಮೊರೆ ಹೋಗಿದ್ದವು.
ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವ ಮುನ್ನ ಬ್ಯಾಂಕ್‌ಗಳು ಬೆಂಗಳೂರಿನ ಸಾಲವಸೂಲಾತಿ ಪ್ರಾಧಿಕಾರ (ಡಿಆರ್‌ಟಿ)ದ ಮುಂದೆ ನಾಲ್ಕು ಮನವಿಗಳನ್ನು ಸಲ್ಲಿಸಿ, ಮಲ್ಯ ಅವರ ಪಾಸ್‌ಪೋರ್ಟ್ ಮುಟ್ಟುಗೋಲಿಗೆ ಹಾಗೂ ಅವರ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಬೇಕೆಂದು ಕೋರಿದ್ದವು.ಅವರಿಗೆ ಡಿಯಾಜಿಯೊ ಪಿಎಲ್‌ಸಿಯಿಂದ ಬರಬೇಕಾಗಿದ್ದ 75 ದಶಲಕ್ಷ ಡಾಲರ್‌ಗಳನ್ನು ತಡೆಹಿಡಿಯುವಂತೆಯೂಅವು ನ್ಯಾಯಾಲಯವನ್ನು ಆಗ್ರಹಿಸಿದ್ದವು. ಮಲ್ಯ ತನ್ನ ಆಸ್ತಿ ವಿವರಗಳನ್ನು ಬಹಿರಂಗಪಡಿಸುವಂತೆ ಆದೇಶ ನೀಡಬೇಕೆಂದು ಅವು ಪ್ರಾಧಿಕಾರವನ್ನು ಒತ್ತಾಯಿಸಿದ್ದವು.
ಯುನೈಟೆಡ್ ಸ್ಪಿರಿಟ್ಸ್‌ನ ಚೇರ್‌ಮನ್ ಹುದ್ದೆಗೆ ಮಲ್ಯ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಬ್ಯಾಂಕ್‌ಗಳು ಡಿಆರ್‌ಟಿಯ ಮೊರೆ ಹೋಗಿದ್ದವು. ಮದ್ಯ ತಯಾರಿಕಾ ಕಂಪೆನಿಯಾದ ಯುನೈಟೆಡ್ ಸ್ಪಿರಿಟ್ಸ್ ನ ಹಾಲಿ ಮಾಲಕನಾದ ಡಿಯಾಜಿಯೋ, ಮಲ್ಯಗೆ ‘ಬೇರ್ಪಡಿಕೆ ಪ್ಯಾಕೇಜ್’ ಆಗಿ 75 ದಶಲಕ್ಷ ಡಾಲರ್‌ಗಳನ್ನು ನೀಡಲು ಒಪ್ಪಿಕೊಂಡಿತ್ತು.
ಎಸ್‌ಬಿಐ ಹೊರತು ಪಡಿಸಿ ಮಲ್ಯ ವಿರುದ್ಧ ಕಾನೂನುಕ್ರಮಕ್ಕೆ ಕೋರ್ಟ್ ಮೆಟ್ಟಲೇರಿದ ಇತರ ಬಾಂಕ್‌ಗಳೆಂದರೆ ಆ್ಯಕ್ಸಿಸ್ ಬ್ಯಾಂಕ್ ಲಿಮಿಟೆಡ್, ಬ್ಯಾಂಕ್ ಆಫ್ ಬರೋಡಾ, ಕಾರ್ಪೊರೇಶನ್ ಬ್ಯಾಂಕ್, ಫೆಡರಲ್ ಬ್ಯಾಂಕ್ ಲಿಮಿಟೆಡ್, ಐಡಿಬಿಐ ಬ್ಯಾಂಕ್ ಲಿಮಿಟೆಡ್, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಜಮ್ಮುಕಾಶ್ಮೀರ್ ಬ್ಯಾಂಕ್ ಲಿ., ಪಂಜಾಬ್ ಆ್ಯಂಡ್ ಸಿಂಧ್ ಬ್ಯಾಂಕ್, ಪಂಜಾಬ್ ನ್ಯಾಶನಲ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್, ಯುಕೋ ಬ್ಯಾಂಕ್ ಹಾಗೂ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ.
♦♦♦
ಲಂಡನ್‌ನಲ್ಲಿ ಮಲ್ಯ?
ವಿಜಯ ಮಲ್ಯ ಅವರು ಮಾರ್ಚ್ 2ರಂದು ದಿಲ್ಲಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಿಂದ ಖಾಸಗಿ ವಾಯುಯಾನ ಸಂಸ್ಥೆಯೊಂದರ ವಿಮಾನದ ಮೂಲಕ ಲಂಡನ್‌ಗೆ ಹಾರಿದ್ದಾರೆಂದು ವಿಶ್ವಸನೀಯ ಮೂಲಗಳಿಂದ ತಿಳಿದುಬಂದಿದೆ. ಮಲ್ಯಗೆ 9 ಸಾವಿರ ಕೋಟಿ ರೂ.ಗೂ ಅಧಿಕ ಸಾಲವನ್ನು ನೀಡಿದ ಬ್ಯಾಂಕ್‌ಗಳು, ಅವರ ಪಾಸ್‌ಪೋರ್ಟ್‌ಗೆ ಮುಟ್ಟುಗೋಲು ಹಾಕಬೇಕೆಂದು ನ್ಯಾಯಾಲಯದ ಮೊರೆಹೋಗಿದ್ದವು. ಆದರೆ ಮಲ್ಯ ಅವುಗಳಿಗೆ ಚಳ್ಳೆಹಣ್ಣು ತಿನ್ನಿಸಿ, ವಿದೇಶಕ್ಕೆ ಹಾರುವಲ್ಲಿ ಸಫಲರಾಗಿದ್ದಾರೆ.
ಮಲ್ಯ ಅವರ ಯುನೈಟೆಡ್ ಸ್ಪಿರಿಟ್ಸ್ ಕಂಪೆನಿಯನ್ನು ಖರೀದಿಸಿರುವ ಡಿಯಾಜಿಯೋದಿಂದ ಅವರಿಗೆ ಬರಬೇಕಾಗಿದ್ದ 75 ದಶಲಕ್ಷ ಡಾಲರ್‌ಗಳ ಪಾವತಿಯನ್ನು ತಡೆಹಿಡಿಯುವಂತೆ ಬ್ಯಾಂಕ್‌ಗಳು ನ್ಯಾಯಾಲಯನ್ನು ಆಗ್ರಹಿಸಿದ್ದವು. ಆದರೆ ಮಲ್ಯ ಈಗಾಗಲೇ ಡಿಯಾಜಿಯೊದಿಂದ ಗಣನೀಯ ಮೊತ್ತವನ್ನು ಪಡೆದುಕೊಂಡಿದ್ದಾರೆಂಬ ಅಂಶವೂ ಇದೀಗ ಬೆಳಕಿಗೆ ಬಂದಿದೆ. ಡಿಯಾಜಿಯೊ ಜೊತೆ ಏರ್ಪಡಿಸಿಕೊಂಡ ಒಪ್ಪಂದದ ಪ್ರಕಾರ ಮಲ್ಯ ಅವರಿಗೆ ಡಿಯಾಜಿಯೊ ತಕ್ಷಣವೇ 40 ದಶಲಕ್ಷ ಡಾಲರ್‌ಗಳನ್ನು ನೀಡಬೇಕಾ ಗಿತ್ತು. ಉಳಿದ ಮೊತ್ತವನ್ನು ಅದು ಮುಂದಿನ ಐದು ವರ್ಷಗಳಲ್ಲಿ ಪಾವತಿಸಬೇಕಾಗಿತ್ತು.