ಜಾಹೀರಾತುಗಳಲ್ಲಿ ಸಚಿವರ ಭಾವಚಿತ್ರಕ್ಕೆ ನಿಷೇಧ
ಹೊಸದಿಲ್ಲಿ, ಮಾ.9: ಜಾಹೀರಾತುಗಳಲ್ಲಿ ಯಾವ ಸಚಿವರ ಭಾವಚಿತ್ರಗಳಿರಬೇಕೆಂದು ನಿರ್ಧರಿಸುವ ಹೊಣೆ ಕಾರ್ಯಾಂಗದ್ದೇ ಹೊರತು ನ್ಯಾಯಾಂಗದ್ದಲ್ಲ. ಸರಕಾರಿ ಜಾಹೀರಾತುಗಳಲ್ಲಿ ರಾಜಕಾರಣಿಗಳ ಭಾವಚಿತ್ರಗಳಿಗೆ ನಿಷೇಧ ವಿಧಿಸುವ ಆದೇಶವು ಜನ ಸಾಮಾನ್ಯರ ಮಾಹಿತಿ ಹಕ್ಕಿನಲ್ಲಿ ಹಸ್ತಕ್ಷೇಪವಾಗುತ್ತದೆಂದು ಸರಕಾರ ಎಂದು ಸುಪ್ರೀಂಕೋರ್ಟ್‌ಗೆ ತಿಳಿಸಿದೆ.
ಸರಕಾರಿ ಜಾಹೀರಾತುಗಳಲ್ಲಿ ಕೇವಲ ಪ್ರಧಾನಿ, ರಾಷ್ಟ್ರಪತಿ ಹಾಗೂ ಭಾರತದ ಮುಖ್ಯ ನ್ಯಾಯಮೂರ್ತಿಗಳ ಭಾವಚಿತ್ರಗಳಿಗೆ ಮಾತ್ರ ಅವಕಾಶ ನೀಡಿರುವ ಈ ಹಿಂದಿನ ಆದೇಶವನ್ನು ಪರಿಷ್ಕರಿಸುವಂತೆ ಸುಪ್ರೀಂಕೋರ್ಟ್‌ಗೆ ಅನೇಕ ಬಿಜೆಪಿ ಹೊರತಾದ ಪಕ್ಷಗಳ ಆಡಳಿತವಿರುವ ರಾಜ್ಯಗಳು ಸಲ್ಲಿಸಿರುವ ಮೇಲ್ಮನವಿಯನ್ನು ಕೇಂದ್ರ ಸರಕಾರ ಬೆಂಬಲಿಸಿದೆ.
ಜಾಹೀರಾತುಗಳಲ್ಲಿ ಯಾವ ರಾಜಕಾರಣಿಗಳ ಭಾವಚಿತ್ರಗಳನ್ನು ಹಾಕಬೇಕೆಂದು ನಿರ್ಧರಿಸುವ ಅಧಿಕಾರ ಕಾರ್ಯಾಂಗದ್ದೇ ಹೊರತು ನ್ಯಾಯಾಂಗದ್ದಲ್ಲವೆಂದು ಈ ರಾಜ್ಯಗಳು ಪ್ರತಿಪಾದಿಸಿವೆ.
ಕೇಂದ್ರ ಹಾಗೂ ತಮಿಳುನಾಡು ಸರಕಾರಗಳನ್ನು ಪ್ರತಿನಿಧಿಸಿರುವ ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ, ಸಂವಿಧಾನದಲ್ಲಿ, ಮುಖ್ಯಮಂತ್ರಿಯೊಬ್ಬ ಪ್ರಧಾನಿಯಷ್ಟೇ ಪ್ರಮುಖನಾಗಿದ್ದಾನೆಂದು ವಾದಿಸಿದರು.
ಜಾಹೀರಾತುಗಳನ್ನು ನೀಡುವ ಮೂಲಕ ಸಾರ್ವಜನಿಕ ಹಣದ ದುರುಪಯೋಗವಾಗುತ್ತವೆಂಬುದು ಪ್ರಾಥಮಿಕವಾಗಿ ಪ್ರಕರಣ ದಾಖಲಸಿದ್ದ ದೂರುದಾರರ ಪ್ರಧಾನ ಕಳವಳವಾಗಿದೆ. ಆದರೆ, ರಾಜ್ಯ, ಕೇಂದ್ರ ಸರಕಾರಗಳು ಪ್ರತಿ ಪೈಸೆಯು ಲೆಕ್ಕವಿಡುವುದರಿಂದ ಈ ಕಳವಳ ನಿರಾಧಾರವಾಗಿದೆಯೆಂದೂ ಅವರು ಹೇಳಿದರು.
ನ್ಯಾಯಾಲಯದ ಆದೇಶವು, ಜನ ಸಾಮಾನ್ಯರ ಮಾಹಿತಿ ಹಕ್ಕಿನೊಂದಿಗೆ ಸಂಘರ್ಷ ನಡೆಸುತ್ತದೆ. ಅಲ್ಲದೆ, ಸಂವಿಧಾನದ 19(1)ನೆ ಪರಿಚ್ಛೇದದನ್ವಯ, ಮಾಹಿತಿಯನ್ನು ನೀಡುವ ಹಕ್ಕು, ಅದನ್ನು ಪಡೆಯುವ ಜನರ ಹಕ್ಕಿನಷ್ಟೇ ಮುಖ್ಯವಾದುದೆಂದು ವಾದಿಸಿದ ರೋಹಟ್ಗಿ, ಕೇವಲ ಅದು ದುರುಪಯೋಗವಾಗುತ್ತದೆಂಬ ಕಾರಣಕ್ಕಾಗಿ ಈ ಕಾನೂನು ಕೆಟ್ಟದಾಗುವುದಿಲ್ಲ ಎಂದರು.
ಈ ಹಿಂದಿನ ತೀರ್ಪು, ಈ ಎಲ್ಲ ಅಂಶಗಳನ್ನು ಪರಿಗಣಿಸಿಲ್ಲವೆಂದು ಅವರು ಹೇಳಿದರು.
ಈ ವಿಷಯದ ಕುರಿತು ಉತ್ತರಿಸುವಂತೆ ಸುಪ್ರೀಂಕೋರ್ಟ್ ಈ ಹಿಂದೆಯೇ ಇತರ ರಾಜ್ಯಗಳಿಗೆ ಸೂಚಿಸಿತ್ತು. ಪ್ರಕರಣದ ವಿಚಾರಣೆ ಮುಂದುವರಿದಿದೆ.