ವಿಜಯ್ ಮಲ್ಯ ದೇಶ ಬಿಡಲು ಕೇಂದ್ರ ಸರಕಾರ ಕಾರಣ :ಕಾಂಗ್ರೆಸ್
ಹೊಸದಿಲ್ಲಿ, ಮಾ.10: ಉದ್ಯಮಿ ಹಾಗೂ ರಾಜ್ಯ ಸಭಾ ಸದಸ್ಯ ವಿಜಯ್ ಮಲ್ಯ ದೇಶ ಬಿಟ್ಟು ಹೋಗಲು ಕೇಂದ್ರ ಸರಕಾರ ಕಾರಣ ಎಂದು ಕಾಂಗ್ರೆಸ್ ಇಂದು ರಾಜ್ಯಸಭೆಯಲ್ಲಿ ಗಂಭೀರ ಆರೋಪ ಮಾಡಿದೆ.
ಮಲ್ಯ ವಿದೇಶಕ್ಕೆ ಪರಾರಿಯಾದ ಪ್ರಕರಣವನ್ನು ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯರು "ಈ ವಿಚಾರದಲ್ಲಿ ಸರಕಾರ ನಿರ್ಲಕ್ಷ್ಯ ವಹಿಸಿದೆ ಅವರಿಗೆ ನೆರವಾಗುವ ರೀತಿಯಲ್ಲಿ ಕೇಂದ್ರ ಸರಕಾರ ಕೆಲಸ ಮಾಡಿದೆ. ಅವರನ್ನು ಬಂಧಿಸದೆ ವಿದೇಶಕ್ಕೆ ತೆರಳಲು ಬಿಟ್ಟದ್ದು ಯಾಕೆ ? ಸರಕಾರ ವಿಜಯ್ ಮಲ್ಯರನ್ನು ಯಾಕೆ ಬಂಧಿಸಿಲ್ಲ ?ಎಂದು ಪ್ರಶ್ನಿಸಿದರು.
ಇದರಿಂದ ರಾಜ್ಯಸಭೆಯಲ್ಲಿ ಇಂದು ಕೋಲಾಹಲ ಉಂಟಾಯಿತು.
ಕಾಂಗ್ರೆಸ್ ಸದಸ್ಯರ ಆರೋಪಕ್ಕೆ ಉತ್ತರಿಸಿದ ಹಣಕಾಸು ಸಚಿವ ಅರುಣ್ ಜೇಟ್ಲಿ " ಮಲ್ಯ ನಷ್ಟದಲ್ಲಿದ್ದ ವಿಚಾರ ಕಾಂಗ್ರೆಸ್‌ನ ಗಮನಕ್ಕೆ ಬಂದಿಲ್ಲವೆ ? ಅವರ ಹಣಕಾಸಿನ ಪರಿಸ್ಥಿತಿ ಚೆನ್ನಾಗಿಲ್ಲ ಎನ್ನುವ ವಿಚಾರ ಗೊತ್ತಿದ್ದರೂ 2010ರಲ್ಲಿ ಕಾಂಗ್ರೆಸ್ ಸರಕಾರ ಅವರಿಗೆ ಸಾಲ ನೀಡಿತ್ತು ” ಎಂದು ತಿರುಗೇಟು ನೀಡಿದರು.
ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದ್ದು, ನ್ಯಾಯ ದೊರಕಿಸಿಕೊಡಲಾಗುವುದು ಎಂದು ಜೇಟ್ಲಿ ಹೇಳಿಕೆ ನೀಡಿದರು.