ಮುದ್ರಾ ರಾಕ್ಷಸನ ಕೃಪೆಯಿಂದ ಬೃಹತ್ ಬ್ಯಾಂಕ್ ದರೋಡೆಯೊಂದು ತಪ್ಪಿತು!
ಢಾಕಾ, ಮಾ. 10: ಕಳೆದ ತಿಂಗಳು ಇತಿಹಾಸದ ಅತ್ಯಂತ ದೊಡ್ಡ ಬ್ಯಾಂಕ್ ದರೋಡೆಯೊಂದು ಸಂಭವಿಸುವುದರಲ್ಲಿತ್ತು. ಈ ಆನ್‌ಲೈನ್ ದರೋಡೆ ಯಶಸ್ವಿಯಾಗುತ್ತಿದ್ದರೆ ಬಾಂಗ್ಲಾದೇಶದ ಸೆಂಟ್ರಲ್ ಬ್ಯಾಂಕ್‌ನ ಸುಮಾರು ಒಂದು ಬಿಲಿಯ ಡಾಲರ್ (ಸುಮಾರು 6,700 ಕೋಟಿ ರೂಪಾಯಿ) ವಂಚಕರ ಪಾಲಾಗುತ್ತಿತ್ತು. ಆದರೆ, ವಂಚಕರು ಮಾಡಿದ ಒಂದು ಸ್ಪೆಲಿಂಗ್ ತಪ್ಪಿನಿಂದಾಗಿ ಈ ಭಾರೀ ದರೋಡೆಯೊಂದು ಕೂದಲೆಳೆಯ ಅಂತರದಿಂದ ತಪ್ಪಿತು!
ಆದಾಗ್ಯೂ, ಅಜ್ಞಾತ ದರೋಡೆಕೋರರು ಸುಮಾರು 81 ಮಿಲಿಯ ಡಾಲರ್ (ಸುಮಾರು 543 ಕೋಟಿ ರೂಪಾಯಿ) ಮೊತ್ತವನ್ನು ಲಪಟಾಯಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.
ಆನ್‌ಲೈನ್ ದರೋಡೆಕೋರರು ಕಳೆದ ತಿಂಗಳು ಬಾಂಗ್ಲಾದೇಶ್ ಸೆಂಟ್ರಲ್ ಬ್ಯಾಂಕ್‌ನ ರಕ್ಷಣಾ ವ್ಯವಸ್ಥೆಗೆ ಕನ್ನಹಾಕಿ ಯೂಸರ್ ನೇಮ್, ಪಾಸ್‌ವರ್ಡ್ ಸೇರಿದಂತೆ ಬ್ಯಾಂಕ್‌ನ ಮಹತ್ವದ ರಕ್ಷಣಾ ದಾಖಲೆಗಳನ್ನು ಕದ್ದರು ಎಂದು ಬಾಂಗ್ಲದೇಶ್ ಬ್ಯಾಂಕ್‌ನ ಹಿರಿಯ ಅಧಿಕಾರಿಗಳು ಹೇಳಿದರು.
ಬಳಿಕ ವಂಚಕರು ಬಾಂಗ್ಲಾದೇಶ ಬ್ಯಾಂಕ್‌ನ ಖಾತೆಯಲ್ಲಿರುವ ಹಣವನ್ನು ಫಿಲಿಪ್ಪೀನ್ಸ್ ಮತ್ತು ಶ್ರೀಲಂಕಾಗಳಲ್ಲಿರುವ ಸಂಸ್ಥೆಗಳ ಖಾತೆಗಳಿಗೆ ವರ್ಗಾಯಿಸುವಂತೆ ಕೋರಿ ಸುಮಾರು 36 ಮನವಿಗಳನ್ನು ನ್ಯೂಯಾರ್ಕ್‌ನ ಫೆಡರಲ್ ರಿಸರ್ವ್ ಬ್ಯಾಂಕ್‌ಗೆ ಸಲ್ಲಿಸಿದರು.
ಒಟ್ಟು ಸುಮಾರು 543 ಕೋಟಿ ರೂ. ಮೊತ್ತವನ್ನು ಫಿಲಿಪ್ಪೀನ್ಸ್‌ನ ವಿವಿಧ ಸಂಸ್ಥೆಗಳ ಖಾತೆಗಳಿಗೆ ವರ್ಗಾಯಿಸಬೇಕೆನ್ನುವ ನಾಲ್ಕು ಮನವಿಗಳ ವ್ಯವಹಾರ ಸುಸೂತ್ರವಾಗಿ ಸಾಗಿತು.
ಆದರೆ, 20 ಮಿಲಿಯ ಡಾಲರ್ (ಸುಮಾರು 134 ಕೋಟಿ ರೂಪಾಯಿ) ಮೊತ್ತವನ್ನು ಶ್ರೀಲಂಕಾದ ದತ್ತಿ ಸಂಘಟನೆಯೊಂದರ ಖಾತೆಗೆ ವರ್ಗಾಯಿಸಬೇಕೆನ್ನುವ ಐದನೆ ಮನವಿ ತಡೆಹಿಡಿಯಲ್ಪಟ್ಟಿತು. ಯಾಕೆಂದರೆ, ಈ ಮನವಿಯಲ್ಲಿ ಕನ್ನಗಾರರು ಆ ಸಂಘಟನೆಯ ಹೆಸರಿನ ಸ್ಪೆಲಿಂಗನ್ನು ತಪ್ಪಾಗಿ ಬರೆದಿದ್ದರು.
ಆ ದತ್ತಿ ಸಂಘಟನೆಯ ಪೂರ್ಣ ಹೆಸರು ಏನೆಂದು ಗೊತ್ತಾಗಿಲ್ಲ. ಆದರೆ, ಆ ಸಂಘಟನೆಯ ಹೆಸರಿನಲ್ಲಿರುವ--------------------------- ‘‘foundation''ನ್ನು ---------------------------ದರೋಡೆಕೋರರು ----------------------‘‘fandation'' ---------------------- ಎಂಬುದಾಗಿ ತಪ್ಪಾಗಿ ಟೈಪ್ ಮಾಡಿದ್ದರು.
ಇದನ್ನು ಗಮನಿಸಿದ ರೂಟಿಂಗ್ ಬ್ಯಾಂಕ್ ಆಗಿರುವ ಡಾಶ್ ಬ್ಯಾಂಕ್ ಬಾಂಗ್ಲಾದೇಶ ಸೆಂಟ್ರಲ್ ಬ್ಯಾಂಕ್‌ನಿಂದ ಸ್ಪಷ್ಟೀಕರಣ ಕೋರಿತು. ಕೂಡಲೇ ಎಚ್ಚೆತ್ತುಕೊಂಡ ಬ್ಯಾಂಕ್ ಎಲ್ಲ ವ್ಯವಹಾರಗಳನ್ನು ಸ್ಥಗಿತಗೊಳಿಸಿತು.
ಈ ಮೂಲಕ ಸುಮಾರು 870 ಮಿಲಿಯ ಡಾಲರ್ (ಸುಮಾರು 5,830 ಕೋಟಿ ರೂಪಾಯಿ) ದರೋಡೆಕೋರರ ಪಾಲಾಗುವುದು ತಪ್ಪಿತು.
ಬಾಂಗ್ಲಾದೇಶ ಸೆಂಟ್ರಲ್ ಬ್ಯಾಂಕ್ ನ್ಯೂಯಾರ್ಕ್‌ನ ಫೆಡರಲ್ ರಿಸರ್ವ್ ಬ್ಯಾಂಕ್‌ನೊಂದಿಗೆ ಹೊಂದಿರುವ ಚಾಲ್ತಿ ಖಾತೆಯಲ್ಲಿ ಸಾವಿರಾರು ಕೋಟಿ ಡಾಲರ್‌ಗಳಿವೆ. ಅಂತಾರಾಷ್ಟ್ರೀಯ ವಿವಾದಗಳ ಇತ್ಯರ್ಥಗಳಲ್ಲಿ ಬಾಂಗ್ಲಾದೇಶ ಈ ಮೊತ್ತವನ್ನು ಬಳಸುತ್ತದೆ.