ಐರೋಪ್ಯ ಒಕ್ಕೂಟದಿಂದ ಹೊರಬರುವುದು ಬೇಡ ಬ್ರಿಟನ್‌ಗೆ ಸ್ಟೀಫನ್ ಹಾಕಿಂಗ್ ಸೇರಿದಂತೆ 150 ವಿಜ್ಞಾನಿಗಳ ಮನವಿ
ಲಂಡನ್, ಮಾ. 10: ಐರೋಪ್ಯ ಒಕ್ಕೂಟದಲ್ಲೇ ಉಳಿಯುವಂತೆ ಬ್ರಿಟನ್‌ಗೆ ಕರೆ ನೀಡಿರುವ 150ಕ್ಕೂ ಅಧಿಕ ಉನ್ನತ ವಿಜ್ಞಾನಿಗಳ ಸಾಲಿಗೆ ಭೌತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಸೇರಿಕೊಂಡಿದ್ದಾರೆ. ಒಕ್ಕೂಟದಿಂದ ಹೊರಬರುವುದು ಬ್ರಿಟನ್‌ನ ವಿಜ್ಞಾನ ಮತ್ತು ವಿಶ್ವವಿದ್ಯಾನಿಲಯಗಳ ಪಾಲಿಗೆ ಅನಾಹುತಕಾರಿಯಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ಸ್ಟೀಫನ್ ಹಾಕಿಂಗ್ ಹಾಗೂ ಮೂವರು ನೊಬೆಲ್ ಪ್ರಶಸ್ತಿ ವಿಜೇತರೂ ಸೇರಿದಂತೆ ರಾಯಲ್ ಸೊಸೈಟಿಯ ಇತರ ಸದಸ್ಯರು ಗುರುವಾರ ‘ದ ಟೈಮ್ಸ್’ ಪತ್ರಿಕೆಗೆ ಪತ್ರವೊಂದನ್ನು ಬರೆದು ಬ್ರಿಟನ್‌ನ ಐರೋಪ್ಯ ಒಕ್ಕೂಟ ನಿರ್ಗಮನವನ್ನು ವಿರೋಧಿಸಿದ್ದಾರೆ.
ಐರೋಪ್ಯ ಒಕ್ಕೂಟದಿಂದ ಹೊರಗೆ ಬಂದರೆ ಎರಡು ವಿಧದಲ್ಲಿ ಬ್ರಿಟನ್‌ಗೆ ನಷ್ಟವುಂಟಾಗುವುದು ಎಂದು ಅವರು ಹೇಳಿದ್ದಾರೆ. ಮೊದಲನೆಯದು, ಪ್ರಸಕ್ತ ವಿಜ್ಞಾನ ಕ್ಷೇತ್ರಕ್ಕೆ ಹೆಚ್ಚಿನ ಹಣ ಬರುತ್ತಿದ್ದು, ಒಟ್ಟಾರೆಯಾಗಿ ಐರೋಪ್ಯ ವಿಜ್ಞಾನಕ್ಕೆ ಹಾಗೂ ಮುಖ್ಯವಾಗಿ ಬ್ರಿಟನ್‌ನ ತಂತ್ರಜ್ಞಾನ ಕ್ಷೇತ್ರಕ್ಕೆ ಲಾಭವಾಗಿದೆ ಎಂದು ಅವರು ಹೇಳಿದ್ದಾರೆ.
‘‘ಎರಡನೆಯದಾಗಿ, ಈಗ ನಾವು ನಮ್ಮ ಹೆಚ್ಚಿನ ಶ್ರೇಷ್ಠ ಸಂಶೋಧಕರನ್ನು ಯುರೋಪ್ ಖಂಡದ ದೇಶಗಳಿಂದ ನೇಮಕ ಮಾಡಿಕೊಳ್ಳುತ್ತಿದ್ದೇವೆ. ಇದು ನಮ್ಮ ದೇಶದ ವಿಜ್ಞಾನಕ್ಕೆ ಸ್ಪರ್ಧಾತ್ಮಕತೆಯನ್ನು ನೀಡಿದೆ’’ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಬ್ರಿಟನ್ ಐರೋಪ್ಯ ಒಕ್ಕೂಟದಿಂದ ಹೊರಬಂದರೆ ಇವುಗಳಿಗೆ ಕುತ್ತು ಬರಲಿದೆ ಎಂದು ಅವರು ಎಚ್ಚರಿಸಿದ್ದಾರೆ.