×
Ad

ಚಂಡಿಗಡದಲ್ಲಿ ದೇಶದ ಪ್ರಪ್ರಥಮ ಭೂಕಂಪ ಮುನ್ನೆಚ್ಚರಿಕೆ ವ್ಯವಸ್ಥೆ ಸ್ಥಾಪನೆ

Update: 2016-03-10 23:41 IST

ಗುರ್ಗಾಂವ್, ಮಾ.10: ಭಾರತದಲ್ಲೇ ಮೊದಲನೆಯದೆನಿಸಿದ ಭೂಕಂಪ ಮುನ್ಸೂಚನೆ ವ್ಯವಸ್ಥೆಯೊಂದನ್ನು ಹರ್ಯಾಣ ಸರಕಾರವು ಚಂಡಿಗಡದ 17ನೆ ಸೆಕ್ಟರ್‌ನಲ್ಲಿರುವ ಹೊಸ ವಿಧಾನಸಭಾ ಕಟ್ಟಡದಲ್ಲಿ ಮಾ.14ರಂದು ಸ್ಥಾಪಿಸಲಿದೆ.

ಈ ವ್ಯವಸ್ಥೆ ಸ್ಥಾಪಿಸಲಾಗಿರುವ ಪ್ರದೇಶಕ್ಕೆ ಭೂಕಂಪದ ಅಲೆಗಳು ತಲುಪುವ ಕೆಲವು ಸೆಕೆಂಡ್‌ಗಳ ಮೊದಲೇ ಅದು ಭೂಕಂಪವನ್ನು ಪತ್ತೆ ಮಾಡುತ್ತದೆ ಹಾಗೂ ನಿವಾಸಿಗಳಿಗೆ ಎಚ್ಚರಿಕೆ ನೀಡುತ್ತದೆ. ಈ ವ್ಯವಸ್ಥೆಯನ್ನು ಸ್ಥಾಪಿಸಲಿರುವ ಕಂಪೆನಿಯು ಮಾ.14ರಂದು ಕೃತಕ ಭೂಕಂಪದ ಅಲೆಗಳನ್ನು ಸೃಷ್ಟಿಸಿ ಅದನ್ನು ಪರೀಕ್ಷಿಸಲಿದೆ. ವ್ಯವಸ್ಥೆಯು ವಿಧಾನಭವನದ ಸುತ್ತಲಿನ ನಿವಾಸಿಗಳಿಗೆ ಹಾಗೂ ಸರಕಾರಿ ಅಧಿಕಾರಿಗಳಿಗೆ ಭೂಕಂಪದ ಬಗ್ಗೆ ಮುನ್ನೆಚ್ಚರಿಕೆ ನೀಡುವುದೆಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ದಲಿಪ್ ಸಿಂಗ್ ವಿವರಿಸಿದ್ದಾರೆ.
ಚಂಡಿಗಡದಂತೆಯೇ ಗುರ್ಗಾಂವ್‌ಸಹ ಭೂಕಂಪದ ಭೀತಿಯಿರುವ ನಗರವಾಗಿದ್ದು, 4ನೆ ಭೂಕಂಪ ವಲಯದಲ್ಲಿದೆ. ಉಪಕರಣಗಳನ್ನು ಕಟ್ಟಡದ ನೆಲಗಳು ಸ್ತಂಭಗಳ ಮೇಲೆ ಸ್ಥಾಪಿಸಲಾಗುವುದು. ಅದು ಪ್ರಾಥಮಿಕ ಕಂಪನದ ಅಲೆಗಳನ್ನು ಪತ್ತೆ ಹಚ್ಚುವಂತೆ ಪ್ರೋಗ್ರಾಂ ಮಾಡಲಾದ ಅಲ್ಗೋರಿದಂನ ಸಹಾಯದಲ್ಲಿ ಕೆಲಸ ಮಾಡುತ್ತದೆ. ಒಂದು ಪ್ರದೇಶದಲ್ಲಿ (ಕಂಪೆನಿ ಕೇಂದ್ರ) ಭೂಕಂಪ ಸಂಭವಿಸಿದಾಗ, ಅದರ ಅಲೆಗಳು ಸುತ್ತಲಿನ ಸ್ಥಳಗಳನ್ನು ತಲುಪಲು ಕೆಲವು ಸೆಕೆಂಡ್‌ಗಳಷ್ಟು ಸಮಯ ಬೇಕಾಗುತ್ತದೆ. ಈ ಉಪಕರಣ ಪ್ರಾಥಮಿಕ ಅಲೆಗಳನ್ನು ಪತ್ತೆ ಹಚ್ಚಿ ಸುತ್ತಲಿನ ಪ್ರದೇಶಗಳ ಜನರನ್ನು ಎಚ್ಚರಿಸುತ್ತದೆ.
ಜರ್ಮನ್ ಮೂಲದ ಸಂಘಟನೆಯೊಂದು ಪರಿಚಯಿಸಿರುವ ಈ ಉಪಕರಣ, ಪ್ರದೇಶದಲ್ಲಿ ಭೂಕಂಪ ಸಂಭವಿಸಿದೊಡನೆಯೇ ಅದರ ಅಲೆಗಳನ್ನು ಗುರುತಿಸುತ್ತದೆನ್ನಲಾಗಿದೆ.
ಭೂಕಂಪದ ಅಲೆಗಳು ವಿಸ್ತಾರವಾದ ಪ್ರದೇಶದಲ್ಲಿ ತಕ್ಷಣವೇ ಬಲಗೊಳ್ಳುವುದಿಲ್ಲ. ಆದರೆ, ಮೊದಲು ಬಲವನ್ನು ಗಳಿಸುತ್ತವೆ. ಇದು ದುರಂತ ಸಂಭವಿಸುವ ಕೆಲವೇ ಸೆಕೆಂಡ್‌ಗಳಿಗೆ ಮುನ್ನ ಜನರಿಗೆ ಎಚ್ಚರಿಕೆ ನೀಡುತ್ತದೆ. ಉಪಕರಣದಲ್ಲಿ ಭೂಕಂಪವನ್ನು ಗುರುತಿಸುವ ಸೆನ್ಸರ್‌ಗಳಿರುತ್ತವೆಂದು ಸೆಕ್ಟಿ ಇಲೆಕ್ಟ್ರಾನಿಕ್ಸ್‌ನ ಆಡಳಿತ ನಿರ್ದೇಶಕ ಜಾರ್ಗನ್ ಪ್ರಿಝಿಬಿಲ್ಯಾಕ್ ವಿವರಿಸಿದ್ದಾರೆ.
ಈ ಉಪಕರಣ ಚಿಲಿಯಲ್ಲಿ 30 ಸೆಕೆಂಡ್‌ಗಳಷ್ಟು ಮುಂಚೆ ಭೂಕಂಪದ ಸೂಚನೆ ನೀಡಿದೆ. ಸುಮಾರು 25 ದೇಶಗಳಲ್ಲಿ ಇದರ ಬಳಕೆ ಮಾಡುತ್ತಿದ್ದಾರೆ ಎಂದು ಸಂಸ್ಥೆಯ ಭಾರತದ ಪ್ರಭಾರಿ ಬಜೇಂದರ್ ಗೋಯೆಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News