×
Ad

ಮಲ್ಯರಿಂದ ಪ್ರತಿ ಪೈಸೆ ವಸೂಲಿ: ರಾಜ್ಯಸಭೆಯಲ್ಲಿ ಜೇಟ್ಲಿ

Update: 2016-03-10 23:56 IST

ಹೊಸದಿಲ್ಲಿ, ಮಾ.10: ವಿಜಯ ಮಲ್ಯರ ಪ್ರಕರಣದಲ್ಲಿ ರಾಜ್ಯಸಭೆಯಲ್ಲಿ ಗುರುವಾರ ಸರಕಾರವನ್ನು ಸಮರ್ಥಿಸಿಕೊಂಡಿರುವ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ,ಬ್ಯಾಂಕ್‌ಗಳ ಒಕ್ಕೂಟವು ಮಲ್ಯರ ವಿರುದ್ಧ ಲುಕೌಟ್ ನೋಟೀಸ್‌ಗೆ ಕೋರುವುದಕ್ಕೂ ಮುನ್ನವೇ ಅವರು ದೇಶ ತೊರೆದಿದ್ದಾರೆ ಎಂದು ಹೇಳಿದ್ದಾರೆ.

ಮಲ್ಯ ಬಾಕಿ ಮಾಡಿರುವ ಪ್ರತಿ ಪೈಸೆಯನ್ನೂ ಬ್ಯಾಂಕುಗಳು ವಸೂಲಿ ಮಾಡುವುದನ್ನು ಖಚಿತಪಡಿಸಲು ಸರಕಾರವು ಪ್ರಯತ್ನಿಸುತ್ತಿದೆ. ನ್ಯಾಯ ದೊರಕುವಂತೆ ನೋಡಿಕೊಳ್ಳಲಾಗುವುದೆಂದು ಜೇಟ್ಲಿ ರಾಜ್ಯ ಸಭೆಗೆ ತಿಳಿಸಿದರು.

ಮಲ್ಯರ ಆಸ್ತಿಯನ್ನು ಕಳೆದ ಕೆಲವು ತಿಂಗಳಲ್ಲಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆಯೆಂಬುದನ್ನು ಬೆಟ್ಟು ಮಾಡಿದ ಅವರು, ಸಿಬಿಐಯ ಲುಕೌಟ್ ಆದೇಶ ಅಧಿಕಾರಿಗಳಿಗೆ ತಲುಪುವ ಮೊದಲೇ ಮಾ.2ರಂದು ಮಲ್ಯ ಓಡಿ ಹೋಗಿದ್ದಾರೆಂದು ಸ್ಪಷ್ಟಪಡಿಸಿದರು. ತನಿಖಾಧಿಕಾರಿಗಳು ಬೆನ್ನ ಹಿಂದೆ ಬಿದ್ದಿದ್ದರೂ ಮಲ್ಯ ಹೇಗೆ ವಿದೇಶಕ್ಕೆ ಪಲಾಯನ ಮಾಡಿದರೆಂಬ ಕುರಿತು ಚರ್ಚಿಸಲು ವಿಪಕ್ಷಗಳು ರಾಜ್ಯ ಸಭೆಯಲ್ಲಿ ನಿಲುವಳಿ ಗೊತ್ತುವಳಿಯೊಂದನ್ನು ಮಂಡಿಸಿದ್ದವು. ಗದ್ದಲದ ಹಿನ್ನೆಲೆಯಲ್ಲಿ ಜೇಟ್ಲಿ ವಿಪಕ್ಷಗಳಿಗೆ, ಸಿಬಿಐ ತನಿಖೆಯೊಂದು ನಡೆಯುತ್ತಿದೆಯೆಂದು ಭರವಸೆ ನೀಡಿದರು.

ಮಲ್ಯರನ್ನು ಭಾರತ ಬಿಟ್ಟು ಹೋಗದಂತೆ ತಡೆಯಬೇಕು ಹಾಗೂ ಅವರ ಪಾಸ್‌ಪೋರ್ಟನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಆಗ್ರಹಿಸಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ 17 ಬ್ಯಾಂಕ್‌ಗಳ ಒಕ್ಕೂಟವೊಂದು ಸಲ್ಲಿಸಿದ್ದ ಮನವಿಯ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್, ಮಲ್ಯರಿಗೆ ನೋಟಿಸ್ ಕಳುಹಿಸಿತ್ತು.

ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಪರ ಸುಪ್ರೀಂ ಕೋರ್ಟ್‌ಗೆ ಹಾಜರಾಗಿದ್ದ ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ, ಯು.ಬಿ.ಗುಂಪಿನ ಮಾಜಿ ಅಧ್ಯಕ್ಷ ದೇಶ ಬಿಟ್ಟಿದ್ದಾರೆಂದು ತನಗೆ ತನಿಖೆ ಸಂಸ್ಥೆಗಳು ತಿಳಿಸಿದೆಯೆಂದಾಗಲೇ ಮಲ್ಯರ ಪರಾರಿ ಪ್ರಕರಣ ಬೆಳಕಿಗೆ ಬಂದಿತ್ತು.

ಭಾರತದ ನಾಗರಿಕರ ಹಣದೊಂದಿಗೆ ಪರಾರಿಯಾಗಲು ಮಲ್ಯರಿಗೆ ಅವಕಾಶ ನೀಡುವುದಿಲ್ಲ. ತಾವವರನ್ನು ಹಿಡಿಯುತ್ತೇವೆ. ಈ ರೀತಿ ತಪ್ಪಿಸಿಕೊಳ್ಳಲು ಮಲ್ಯರಿಗೆ ಅವಕಾಶ ನೀಡುವುದಿಲ್ಲ. ದೇಶದ ಹಣವನ್ನು ಅಕ್ರಮವಾಗಿ ಕಿಸೆಗೆ ಹಾಕಿಕೊಂಡಿರುವ ಯಾರಿಗೇ ಆಗಲಿ, ಶಾಂತಿಯಿಂದ ಜೀವಿಸಲು ತಾವು ಬಿಡುವುದಿಲ್ಲವೆಂದು ಸಂಸದೀಯ ವ್ಯವಹಾರ ಸಹಾಯಕ ಸಚಿವ ಮುಖ್ತರ್ ಅಬ್ಬಾಸ್ ನಕ್ವಿ ಸಹ ಹೇಳಿದ್ದಾರೆ.
ಬ್ಯಾಂಕ್‌ಗಳ ಮನವಿಗೆ ಮಾ.30ರೊಳಗೆ ಉತ್ತರಿಸುವಂತೆ ಮಲ್ಯರಿಗೆ ಸುಪ್ರೀಂಕೋರ್ಟ್ ಆದೇಶಿಸಿತ್ತು.


ಲಂಡನ್ ನಿವಾಸದಲ್ಲಿ ವಿಜಯ ಮಲ್ಯ ಪ್ರತ್ಯಕ್ಷ

ಹೊಸದಿಲ್ಲಿ, ಮಾ.10: ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂ. ಸಾಲವನ್ನು ಬಾಕಿಯಿಟ್ಟು ಭಾರತದಿಂದ ಪರಾರಿಯಾಗಿರುವ ಮದ್ಯದ ದೊರೆ ವಿಜಯ ಮಲ್ಯ ಅವರು ಗುರುವಾರ ಲಂಡನ್‌ನಲ್ಲಿ ಪ್ರತ್ಯಕ್ಷರಾಗಿದ್ದಾರೆ. ಮಲ್ಯ ವಾರದ ಹಿಂದೆಯೇ ದೇಶವನ್ನು ತೊರೆದಿದ್ದಾರೆ ಮತ್ತು ಬಹುಶಃ ಬ್ರಿಟನ್ನಿಗೆ ತೆರಳಿರಬಹುದು ಎಂದು ಕೇಂದ್ರ ಸರಕಾರವು ಬುಧವಾರವಷ್ಟೇ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿತ್ತು.

ಮಲ್ಯ ತನ್ನ ಲಂಡನ್ನಿನ ನಿವಾಸದಲ್ಲಿದ್ದಾರೆ ಎಂದು ಅಲ್ಲಿಯ ಕಾವಲುಗಾರರು ಆರಂಭದಲ್ಲಿ ತಿಳಿಸಿದ್ದರಾದರೂ ಮಾಧ್ಯಮ ಪ್ರತಿನಿಧಿಗಳ ವಾಸನೆ ಹೊಡೆದ ಬಳಿಕ ಅದನ್ನು ನಿರಾಕರಿಸಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಮಲ್ಯರ ಪಾಸ್‌ಪೋರ್ಟ್‌ನ್ನು ಜಪ್ತಿ ಮಾಡಬೇಕು ಮತ್ತು ನ್ಯಾಯಾಲಯದಲ್ಲಿ ಅವರ ಉಪಸ್ಥಿತಿಗೆ ಆದೇಶಿಸಬೇಕು ಎಂದು ಕೋರಿ ಬ್ಯಾಂಕುಗಳು ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದ್ದು, ಬುಧವಾರ ಮದ್ಯದ ದೊರೆಗೆ ನೋಟಿಸ್ ಹೊರಡಿಸಿರುವ ಅದು ಎರಡು ವಾರಗಳಲ್ಲಿ ಉತ್ತರಿಸುವಂತೆ ನಿರ್ದೇಶ ನೀಡಿದೆ.

ಮಲ್ಯ ಲಂಡನ್ನಿನಲ್ಲಿ ಕನಿಷ್ಠ ಎರಡು ಭವ್ಯ ನಿವಾಸಗಳನ್ನು ಹೊಂದಿದ್ದಾರೆ.

....

9 ಸಾವಿರ ಕೋಟಿ ರೂ. ಸಾಲ ಇರುವ ಮಲ್ಯರನ್ನು ವಿದೇಶಕ್ಕೆ ಪರಾರಿಯಾಗಲು ಕೇಂದ್ರ ಸರಕಾರವೇ ಅವಕಾಶ ಮಾಡಿಕೊಟ್ಟಿದೆ. 

- ರಾಹುಲ್ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ

....

ವಿಜಯ ಮಲ್ಯಗೆ 9 ಸಾವಿರ ಕೋಟಿ ರೂ. ಸಾಲವನ್ನು ಬ್ಯಾಂಕ್‌ಗಳು ನೀಡಿದ್ದು ಯುಪಿಎ ಆಡಳಿತಾವಧಿಯಲ್ಲಿ.
- ಅರುಣ್ ಜೇಟ್ಲಿ, ವಿತ್ತ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News