ಕಿಡ್ನಿ ಕಸಿ ಕಾನೂನಿಗೆ ವಿಶೇಷ ನಿಯಮ ರೂಪಿಸಲು ಕ್ರಮ

Update: 2016-03-10 18:59 GMT

ಮಂಗಳೂರು, ಮಾ.10: ಕಿಡ್ನಿ ಕಸಿ ಮಾಡುವಲ್ಲಿ ಪ್ರಸಕ್ತ ಇರುವ ಕಾನೂನಿಂದಾಗಿ ರೋಗಿಗಳು ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಗಿರುವುದರಿಂದ ಕಾನೂನನ್ನು ಸರಳಗೊಳಿಸಿ ವಿಶೇಷ ನಿಯಮಗಳನ್ನು ರೂಪಿಸುವ ನಿಟ್ಟಿನಲ್ಲಿ ತಜ್ಞರ ಜತೆ ಮಾತುಕತೆ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಹೇಳಿದರು. ನಗರದ ಪುರಭವನದಲ್ಲಿ ಕಿಡ್ನಿ ರೋಗಿಗಳ ಸಂಘ ಮತ್ತು ಆರೋಗ್ಯ ಇಲಾಖೆಯ ಆಶ್ರಯದಲ್ಲಿ ಗುರುವಾರ ನಡೆದ ಕಿಡ್ನಿ ರೋಗಿಗಳ ಸಮಾವೇಶ ಮತ್ತು ವಿಶ್ವ ಕಿಡ್ನಿ ದಿನಾಚರಣೆಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಕಿಡ್ನಿ ರೋಗಿಗಳು ಶಾಶ್ವತ ಚಿಕಿತ್ಸಾ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಡಯಾಲಿಸ್‌ಗಿಂತಲೂ ಕಿಡ್ನಿ ಕಸಿ ಅತೀ ಪ್ರಮುಖ. ಆದರೆ ಕಿಡ್ನಿ ಕಸಿಗಾಗಿ ರೋಗಿಯೊಬ್ಬ ದಾನಿಯಿಂದ ಕಿಡ್ನಿ ಪಡೆಯಲು ಕೆಲ ವರ್ಷಗಳ ಕಾಲ ಕಾಯಬೇಕಾಗುತ್ತದೆ ಮತ್ತು ಹಲವಾರು ರೀತಿಯ ಕಾನೂನು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದಕ್ಕಾಗಿ ಕಾನೂನನನ್ನು ಸರಳಗೊಳಿಸಬೇಕಾಗಿದೆ ಎಂದು ಖಾದರ್ ಹೇಳಿದರು. ರಾಜ್ಯದ ಜಿಲ್ಲಾ ಆಸ್ಪತ್ರೆಗಳಲ್ಲಿ ಉಚಿತ ಡಯಾಲಿಸಿಸ್ ಕೇಂದ್ರವನ್ನು ಆರಂಭಿಸಲಾಗಿದ್ದು, ತಾಲೂಕಿನಲ್ಲೂ ಆರಂಭಿಸಲು ಆರೋಗ್ಯ ಇಲಾಖೆ ಮುಂದಾಗಿದೆ. ಆದರೆ ನೆಫ್ರಾಲಜಿಸ್ಟ್ ಸೇರಿದಂತೆ ಈ ಕುರಿತು ತಜ್ಞರ ಕೊರತೆಯಿಂದಾಗಿ ಇದು ಅಸಾಧ್ಯವಾಗಿದ್ದು, ಮುಂದಿನ ದಿನಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಈ ಪ್ರಕ್ರಿಯೆಗೆ ಚಾಲನೆ ನೀಡುವ ಬಗ್ಗೆಯೂ ಚಿಂತನೆ ಇದೆ ಎಂದು ಸಚಿವ ಖಾದರ್ ತಿಳಿಸಿದರು. ಕಾರ್ಯಕ್ರಮದಲ್ಲಿ ಕಿಡ್ನಿ ವಾರ್ತೆಯ 3ನೆ ಸಂಚಿಕೆಯನ್ನು ಸಚಿವ ಯು.ಟಿ.ಖಾದರ್ ಬಿಡುಗಡೆ ಗೊಳಿಸಿದರು. ಅಧ್ಯಕ್ಷತೆಯನ್ನು ಶಾಸಕ ಜೆ.ಆರ್.ಲೋಬೊ ವಹಿಸಿ, ಮಾತನಾ ಡಿದರು. ಸಮಾವೇಶವನ್ನು ಉದ್ಘಾಟಿಸಿದ ಜಿಲ್ಲಾಧಿಕಾರಿ ಎ. ಬಿ.ಇಬ್ರಾಹೀಂ, ಸಾಂಪ್ರದಾಯಿಕ ಆಹಾರ ಪದ್ಧತಿಯತ್ತ ಗಮನಹರಿಸಿ ಅತೀ ಹೆಚ್ಚು ತಿನ್ನುವ ಹವ್ಯಾಸದಿಂದ ದೂರವಿರಬೇಕು ಎಂದರು. ಕಿಡ್ನಿ ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸುವ ಬಗ್ಗೆ ಅವರು ಸಭಿಕರಿಗೆ ಪ್ರಮಾಣವಚನ ಬೋಧಿಸಿದರು. ಕರಾವಳಿ ಕಾಲೇಜು ಸಮೂಹ ಸಂಸ್ಥೆಯ ಅಧ್ಯಕ್ಷ ಎಸ್. ಗಣೇಶ್ ರಾವ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News