ಮಹಿಳೆಯರನ್ನು ‘ಹನಿ’ ‘ಬೇಬಿ’ ಎಂದು ಕರೆದರೆ ಜೈಲು ಪಾಲಾದೀರಿ ಜೋಕೆ!
ಲಕ್ನೌ : ಮಹಿಳೆಯೊಬ್ಬಳನ್ನು ‘ಬೇಬಿ’ ಅಥವಾ ’ಹನಿ’ ಎಂದು ಅವಳ ಇಚ್ಛೆಗೆ ವಿರುದ್ಧವಾಗಿ ಕರೆದರೆ ನೀವು ಜೈಲು ಪಾಲಾಗುತ್ತೀರೆಂದು ನಿಮಗೆ ಗೊತ್ತಿದೆಯೇ?ಈ ಬಗ್ಗೆ ಹಾಗೂಲೈಂಗಿಕ ಕಿರುಕುಳ ಅಥವಾ ಮಹಿಳೆಯರ ವಿರುದ್ಧದ ಅಪರಾಧವೆಂದು ಪರಿಗಣಿಸಬಹುದಾದ ಹಲವು ಇತರ ವಿಚಾರಗಳ ಬಗ್ಗೆ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಲ್ಲಿ ಅರಿವನ್ನುಂಟು ಮಾಡಲು ಉತ್ತರಖಂಡ ರಾಜ್ಯ ಮಹಿಳಾ ಆಯೋಗ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲು ಯೋಚಿಸುತ್ತಿದೆ. ಮಹಿಳೆಯರ ರಕ್ಷಣೆಗಾಗಿರುವ ಹಲವು ಕಾನೂನುಗಳ ಬಗ್ಗೆ ಈ ಕಾರ್ಯಕ್ರಮಗಳಲ್ಲಿ ಮಾಹಿತಿಯೊದಗಿಸಲಾಗುವುದು.
ಹಲವಾರು ಮಹಿಳೆಯರು ಆಕ್ಷೇಪಾರ್ಹ ನಡವಳಿಕೆಗಳನ್ನು ನಿರ್ಲಕ್ಷ್ಯಿಸಿ ಮಾನಸಿಕ ಹಿಂಸೆಗೆ ಗುರಿಯಾಗುತ್ತಾರಾದರೆ ಇನ್ನೂ ಕೆಲವು ಮಹಿಳೆಯರಿಗೆ ಯಾವುದು ಕಿರುಕಳ ಅಥವಾ ಹಿಂಸೆಯೆಂದೇ ಗೊತ್ತಿರುವುದಿಲ್ಲ ಎಂದು ಆಯೋಗದ ಅಧ್ಯಕ್ಷೆ ಸರೋಜಿನಿ ಕೈಂತ್ಯೂರ ಹೇಳಿದ್ದಾರೆ.
‘‘ಹುಡುಗಿಯರೊಂದಿಗೆ ಹೇಗೆ ವರ್ತಿಸಬೇಕು (ಹೇಗೆ ವರ್ತಿಸಬಾರದು) ಎಂಬುದನ್ನು ಹುಡುಗರು ತಿಳಿಯಬೇಕು ಹಾಗೂಹುಡುಗರು ಯಾವಾಗ ಗೆರೆಯನ್ನು ದಾಟುತ್ತಾರೆಂಬುದನ್ನು ಹುಡುಗಿಯರು ಅರಿಯಬೇಕೆಂದು ನಾವು ಬಯಸುತ್ತೇವೆ,’’ಎಂದು ಅವರು ವಿವರಿಸಿದರು.
ಎಪ್ರಿಲ್ 2015ರಿಂದ ಡಿಸೆಂಬರ್ 2015ರ ತನಕ ಆಯೋಗವು 1,118ದೂರುಗಳನ್ನು ಸ್ವೀಕರಿಸಿದ್ದು ಹೆಚ್ಚಿನವು ಲೈಂಗಿಕ ಕಿರುಕುಳ ಪ್ರಕರಣಗಳಾಗಿವೆ, ಎಂದು ಅವರು ಮಾಹಿತಿ ನೀಡಿದರು.
ಮಹಿಳೆಯರ ವಿರುದ್ಧ ಅವಹೇಳನಕಾರಿ ಪದ ಪ್ರಯೋಗ ಮಾಡುವುದು, ಅವರನ್ನು ಅಪಹಾಸ್ಯ ಮಾಡುವುದು., ಲೈಂಗಿಕತೆ ಉತ್ತೇಜಿಸುವಚಿತ್ರ ಹಾಗೂ ಸಂದೇಶಗಳನ್ನು ತೋರಿಸುವುದು ಮತ್ತು ಮಹಿಳೆಯೊಬ್ಬಳಖಾಸಗಿ ಬದುಕಿನ ಬಗ್ಗೆ ವದಂತಿ ಹಬ್ಬಿಸುವುದು, ಇವೆಲ್ಲಾ ಕಿರುಕುಳಕ್ಕೆ ಸಮವೆಂದು ಅವರು ಹೇಳಿದರು.