2016ಕ್ಕೆ ಭಾರತ ಹಜ್ ಕೋಟ 1,36,020
ಜಿದ್ದಾ, ಮಾ. 11: ಈ ವರ್ಷ ಭಾರತೀಯರ ಹಜ್ ಕೋಟವನ್ನು 1,36,020ಕ್ಕೆ ನಿಗದಿಪಡಿಸುವ ಒಪ್ಪಂದವೊಂದಕ್ಕೆ ಸೌದಿ ಅರೇಬಿಯ ಮತ್ತು ಭಾರತ ಗುರುವಾರ ಸಹಿ ಹಾಕಿವೆ.
ಈ ಪೈಕಿ 1,00,020 ಯಾತ್ರಿಕರು ಭಾರತೀಯ ಹಜ್ ಸಮಿತಿ ಮೂಲಕ ಬರುತ್ತಾರೆ ಹಾಗೂ ಇತರ 36,000 ಮಂದಿ ಖಾಸಗಿ ಪ್ರವಾಸ ನಿರ್ವಾಹಕರ ಮೂಲಕ ಯಾತ್ರೆ ಕೈಗೊಳ್ಳುತ್ತಾರೆ.
ವಿದೇಶಾಂಗ ವ್ಯವಹಾರಗಳ ಖಾತೆಯ ಸಹಾಯಕ ಸಚಿವ ಜನರಲ್ ವಿ.ಕೆ. ಸಿಂಗ್ ನೇತೃತ್ವದ ಉನ್ನತ ಮಟ್ಟದ ನಿಯೋಗವೊಂದು ಗುರುವಾರ ಜಿದ್ದಾದಲ್ಲಿ ಅಲ್ಲಿನ ಹಜ್ ಸಚಿವ ಬಂದಾರ್ ಹಜ್ಜರ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿತು.
ಭಾರತೀಯ ನಿಯೋಗದಲ್ಲಿ ಸೌದಿ ಅರೇಬಿಯಕ್ಕೆ ಭಾರತದ ರಾಯಭಾರಿ ಅಹ್ಮದ್ ಜಾವೇದ್, ಕಾನ್ಸುಲ್ ಜನರಲ್ ಬಿ.ಎಸ್. ಮುಬಾರಕ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಹಜ್ ವಿಶೇಷಾಧಿಕಾರಿಯಾಗಿರುವ ಅಸೀಮ್ ಮಹಾಜನ್ ಭಾರತೀಯ ನಿಯೋಗದಲ್ಲಿದ್ದರು.
ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ರಾಕೇಶ್ ಮೋಹನ್,ಭಾರತೀಯ ಹಜ್ ಸಮಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅತಾವುರ್ ರಹಮಾನ್, ನಾಗರಿಕ ವಾಯುಯಾನ ಸಚಿವಾಲಯದ ನಿರ್ದೇಶಕಿ ಪೂಜಾ ಜಿಂದಾಲ್, ಉಪ ಕಾನ್ಸುಲ್ ಜನರಲ್ ಹಾಗೂ ಹಜ್ ಕಾನ್ಸುಲ್ ಮುಹಮ್ಮದ್ ಶಾಹಿದ್ ಅಲಂ ಅವರು ನಿಯೋಗದ ಸದಸ್ಯರಾಗಿದ್ದರು.
ಸೌದಿ ನಿಯೋಗದಲ್ಲಿ ಉಪ ಹಜ್ ಸಚಿವ ಹುಸೈನ್ ಶರೀಫ್, ಉಪ ಸಾರಿಗೆ ಸಚಿವ ಮುಹಮ್ಮದ್ ಸಿಮ್‌ಸಿಮ್, ಉಪ ಆಂತರಿಕ ವ್ಯವಹಾರಗಳ ಸಚಿವ ರಾಜಕುಮಾರ ಮನ್ಸೂರ್ ಬಿನ್ ಮುಹಮ್ಮದ್ ಬಿನ್ ಸಅದ್ ಅಲ್-ಸೌದ್ ಹಾಗೂ ಇತರ ಅಧಿಕಾರಿಗಳು ಇದ್ದರು.
ಮಕ್ಕಾ ಮಸೀದಿ ಮಸ್ಜಿದುಲ್ ಹರಂನ ವಿಸ್ತರಣೆ ಕಾರ್ಯ ಈಗ ಪ್ರಗತಿಯಲ್ಲಿರುವುದರಿಂದ ಸೌದಿ ಅರೇಬಿಯವು ಈ ವರ್ಷ ಎಲ್ಲ ದೇಶಗಳ ಹಜ್ ಕೋಟವನ್ನು 20 ಶೇಕಡದಷ್ಟು ಕಡಿತಗೊಳಿಸಿದೆ. ಈ ಕಡಿತ ಸೌದಿ ಅರೇಬಿಯ ಮತ್ತು ಕೊಲ್ಲಿ ಸಹಕಾರ ಮಂಡಳಿ (ಜಿಸಿಸಿ)ಯ ದೇಶಗಳಿಗೆ 50 ಶೇಕಡದಷ್ಟು ಆಗಿರುತ್ತದೆ.
ಈ ಸಂದರ್ಭದಲ್ಲಿ, ಸೌದಿ ಮತ್ತು ಭಾರತೀಯ ಅಧಿಕಾರಿಗಳು, ಯಾತ್ರಿಕರಿಗೆ ಉತ್ತಮ ಆಹಾರ ಪೂರೈಕೆ ಸೇವೆಯೊದಗಿಸುವುದು ಸೇರಿದಂತೆ ವಿವಿಧ ಹಜ್ ಸಂಬಂಧಿ ವಿಷಯಗಳ ಬಗ್ಗೆ ಚರ್ಚಿಸಿದರು. ಹಜ್ 1437ಕ್ಕಾಗಿ ನಿಕಟ ಸಮನ್ವಯದಿಂದ ಕೆಲಸ ಮಾಡಲು ಉಭಯ ಬಣಗಳು ಒಪ್ಪಿಕೊಂಡವು.