ಟ್ರಂಪ್ ಸಭೆಯಲ್ಲಿ ಪ್ರತಿಭಟಿಸಿದ ಕರಿಯನಿಗೆ ಹಲ್ಲೆ
Update: 2016-03-11 19:40 IST
ನ್ಯೂಯಾರ್ಕ್, ಮಾ. 11: ಅಮೆರಿಕದ ನಾರ್ತ್ ಕ್ಯಾರಲೈನ ರಾಜ್ಯದ ಫ್ಯಾಯೆಟ್‌ವಿಲ್‌ನಲ್ಲಿ ಬುಧವಾರ ನಡೆದ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಆಕಾಂಕ್ಷಿ ಡೊನಾಲ್ಡ್ ಟ್ರಂಪ್‌ರ ಪ್ರಚಾರ ಸಭೆಯಲ್ಲಿ ಕರಿಯ ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಲಾಗಿದೆ.
26 ವರ್ಷದ ರಕೀಮ್ ಜೋನ್ಸ್ ಎಂಬವರು ಟ್ರಂಪ್ ಸಭೆಯಲ್ಲಿ ಪ್ರತಿಭಟನೆ ನಡೆಸಿದರು ಎನ್ನಲಾಗಿದೆ. ಅವರನ್ನು ಪೊಲೀಸರು ಸಭೆಯಿಂದ ಹೊರಗೆ ಕರೆದುಕೊಂಡು ಹೋಗುತ್ತಿದ್ದಾಗ, ಓರ್ವ ಬಿಳಿಯ ವ್ಯಕ್ತಿ ಅವರನ್ನು ಸಮೀಪಿಸಿ ಮುಖಕ್ಕೆ ಗುದ್ದಿದನು ಹಾಗೂ ತಳ್ಳಿದನು ಎನ್ನಲಾಗಿದೆ. ಆಗ ಮುಗ್ಗರಿಸಿದ ಜೋನ್ಸ್ ನೆಲಕ್ಕೆ ಬಿದ್ದರು. ಅವರನ್ನು ಸುತ್ತುವರಿದ ಪೊಲೀಸರು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು.
ಹಲ್ಲೆಗೆ ಸಂಬಂಧಿಸಿ ಪೊಲೀಸರು ಗುರುವಾರ ನಾರ್ತ್ ಕ್ಯಾರಲೈನದ ಲಿನ್‌ಡೆನ್ ನಿವಾಸಿ 78 ವರ್ಷದ ಜಾನ್ ಮೆಕ್‌ಗ್ರಾ ಎಂಬಾತನ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.