×
Ad

ಫೆಲೆಸ್ತೀನ್ ಟಿವಿ ನಿಲಯದ ಮೇಲೆ ಇಸ್ರೇಲ್ ದಾಳಿ

Update: 2016-03-11 19:45 IST

ಜೆರುಸಲೇಂ, ಮಾ. 11: ಇಸ್ರೇಲಿ ಸೈನಿಕರು ಗುರುವಾರ ರಾತ್ರಿ ‘ಫೆಲೆಸ್ತೀನ್ ಟುಡೆ’ ಟೆಲಿವಿಶನ್ ಚಾನೆಲ್‌ನ ಪಶ್ಚಿಮ ದಂಡೆ ಕಚೇರಿಗೆ ದಾಳಿ ನಡೆಸಿ, ಹಿಂಸೆಯನ್ನು ಪ್ರಚೋದಿಸುತ್ತಿರುವ ಆರೋಪದಲ್ಲಿ ಅದರ ಮ್ಯಾನೇಜರ್‌ರನ್ನು ಬಂಧಿಸಿದ್ದಾರೆ.

ಐದು ತಿಂಗಳುಗಳಿಂದ ನಡೆಯುತ್ತಿರುವ ಸರಣಿ ಹಿಂಸೆಗೆ ಫೆಲೆಸ್ತೀನ್ ಟಿವಿ ಚಾನೆಲ್‌ಗಳು ಪ್ರಚೋದನೆ ನೀಡುತ್ತಿವೆ ಎಂದು ಇಸ್ರೇಲ್ ಭಾವಿಸಿದ್ದು, ಅವುಗಳ ಬಾಯಿಮುಚ್ಚಿಸುವ ನೂತನ ಪ್ರಯತ್ನವಾಗಿ ಪ್ರಸಕ್ತ ಟಿವಿ ಚಾನೆಲ್‌ನ ರಮಲ್ಲಾ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಭಾವಿಸಲಾಗಿದೆ.

 ಈ ಚಾನೆಲ್ ‘‘ಭಯೋತ್ಪಾದಕ ಗುಂಪಿನ ಪರವಾಗಿ ಕಾರ್ಯಾಚರಿಸುತ್ತಿತ್ತು’’ ಎಂದು ಇಸ್ರೇಲ್‌ನ ಆಂತರಿಕ ಭದ್ರತಾ ಸಂಸ್ಥೆ ಶಿನ್ ಬೆಟ್ ಆರೋಪಿಸಿದೆ ಹಾಗೂ ಸೇನೆಯೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಅದನ್ನು ಮುಚ್ಚಿಸಿರುವುದಾಗಿ ತಿಳಿಸಿದೆ.

ಇಸ್ರೇಲಿ ಪಡೆಗಳು ‘ಫೆಲೆಸ್ತೀನ್ ಟುಡೆ’ಯ ಮ್ಯಾನೇಜರ್ ಫಾರೂಕ್ ಅಲಿಯತ್ ಎಂಬಾತನನ್ನು ಬಂಧಿಸಿವೆ. ಆತ ಈ ಹಿಂದೆ ತನ್ನ ಚಟುವಟಿಕೆಗಳಿಗಾಗಿ ಇಸ್ರೇಲ್‌ನ ಜೈಲಿನಲ್ಲಿದ್ದ ಎಂದು ಅದು ಹೇಳಿದೆ.

ಆದಾಗ್ಯೂ, ಚಾನೆಲ್ ಹಮಾಸ್ ನಿಯಂತ್ರಣದ ಗಾಝಾ ಪಟ್ಟಿಯಿಂದ ಪ್ರಸಾರ ಆರಂಭಿಸಿದೆ. ಅಕ್ಟೋಬರ್ ಒಂದರಿಂದ ಆರಂಭಗೊಂಡ ಹಿಂಸಾ ಸರಣಿಯಲ್ಲಿ 188 ಫೆಲೆಸ್ತೀನೀಯರು, 28 ಇಸ್ರೇಲಿಗಳು, ಇಬ್ಬರು ಅಮೆರಿಕನ್ನರು, ಎರಿಟ್ರಿಯ ಮತ್ತು ಸುಡಾನ್‌ನ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News