×
Ad

ಗುಜರಾತ್ ಪೊಲೀಸರ ವಿರುದ್ಧದ ಮೊಕದ್ದಮೆ ರದ್ದತಿ ಕೋರಿದ್ದ ಅರ್ಜಿ ಪರಿಗಣನೆಗೆ ಸು.ಕೋ. ನಕಾರ

Update: 2016-03-11 23:50 IST

ಹೊಸದಿಲ್ಲಿ, ಮಾ.11: ಬಂಧಿತ ಲಷ್ಕರೆ ತಯ್ಯಿಬಾ ಕಾರ್ಯಕರ್ತ ಡೇವಿಡ್ ಹೇಡ್ಲಿಯ ಇತ್ತೀಚೆಗಿನ ಸಾಕ್ಷದ ಹಿನ್ನೆಲೆಯಲ್ಲಿ, 2004ರ ಇಶ್ರತ್ ಜಹಾನ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಗುಜರಾತ್‌ನ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ವಿಚಾರಣೆ, ಅಮಾನತು ಹಾಗೂ ಕೈಗೊಳ್ಳಲಾಗಿರುವ ಇತರ ಕ್ರಮಗಳನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ಇಂದು ನಿರಾಕರಿಸಿದೆ.

‘‘ಪರಿಚ್ಛೇದ 32ರ ಉದ್ದೇಶವೇನು? ನೀವು ಅದರನ್ವಯ ಅಂತಹ ಪ್ರಕರಣವೊಂದನ್ನು ದಾಖಲಿಸುವಂತಿಲ್ಲ. ನೀವು ಬಯಸುವಿರಾದರೆ, ಸಂವಿಧಾನದ 226ನೆ ವಿಧಿಯನ್ವಯ ಹೈಕೋರ್ಟ್‌ಗೆ ಹೋಗಿ’’ ಎಂದು ನ್ಯಾಯಮೂರ್ತಿಗಳಾದ ಪಿ.ಸಿ.ಘೋಷ್ ಹಾಗೂ ಅಮಿತಾಭ್ ರಾಯ್‌ಯವರನ್ನೊಳಗೊಂಡ ಪೀಠವೊಂದು, ವಕೀಲ ಎಂ.ಎಲ್.ಶರ್ಮಾ ವಾದ ಆರಂಭಿಸಿದ ನಿಮಿಷದ ಬಳಿಕ ಹೇಳಿತು.
ಆದಾಗ್ಯೂ, ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಈ ವಿಷಯದಲ್ಲಿ ಸ್ಪಷ್ಟೀಕರಣ ಕೇಳಿದಾಗ, ಅರ್ಹತೆಯ ಆಧಾರದಲ್ಲಿ ಅರ್ಜಿಯನ್ನು ತಳ್ಳಿ ಹಾಕಿದುದಲ್ಲವೆಂದು ಪೀಠ ಸ್ಪಷ್ಟಪಡಿಸಿತು.
ಹಕ್ಕುಳ್ಳ ಯಾವನೇ ವ್ಯಕ್ತಿಯೂ ಸೂಕ್ತ ಪ್ರಾಧಿಕಾರವನ್ನು ಸಮೀಪಿಸಬಹುದು ಎನ್ನುವ ಮೂಲಕ ಪೀಠವು, ಆಗಿನ ಪೊಲೀಸ್ ಉಪ ಮಹಾನಿರೀಕ್ಷಕ ಡಿ.ಜಿ.ವಂಝಾರ ಸಹಿತ ಸಂತ್ರಸ್ತ ಗುಜರಾತ್ ಪೊಲೀಸ್ ಅಧಿಕಾರಿಗಳಿಗೆ, ರಾಜಕೀಯವಾಗಿ ಸೂಕ್ಷ್ಮ ಪ್ರಕರಣದಲ್ಲಿ ತಮ್ಮ ಖುಲಾಸೆಗೋಸ್ಕರ ನ್ಯಾಯಾಲಯಕ್ಕೆ ಹೋಗಲು ಹಾದಿ ಮಾಡಿ ಕೊಟ್ಟಿದೆ.
ಗುಜರಾತ್ ಪೊಲೀಸರಿಂದ ಎನ್‌ಕೌಂಟರ್ ಮಾಡಲ್ಪಟ್ಟಿದ್ದ ಇಶ್ರತ್ ಸಹಿತ ನಾಲ್ವರು ಲಷ್ಕರೆ ತಯ್ಯಿಬಾ ಭಯೋತ್ಪಾದಕರಾಗಿದ್ದರೆಂದು ಹೇಡ್ಲಿ, ಮುಂಬೈಯ ನ್ಯಾಯಾಲಯವೊಂದರ ಮುಂದೆ ಸಾಕ್ಷಿ ಹೇಳಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News