ಪಶ್ಚಿಮ ಬಂಗಾಳದ 80% ಮುಸ್ಲಿಮರ ಮಾಸಿಕ ಆದಾಯ ಕೇವಲ 5000 ರೂಪಾಯಿ : ಅಮರ್ತ್ಯ ಸೇನ್ ವರದಿ

Update: 2016-03-12 14:24 GMT

ಕೊಲ್ಕತಾ, ಮಾ. ೧೨: ಮೂರು ದಶಕಗಳ ಎಡರಂಗದ ಆಡಳಿತ ಹಾಗು ಕಳೆದ ೫ ವರ್ಷಗಳ ಮಮತಾ ಬ್ಯಾನರ್ಜಿ ಸರಕಾರವಿರುವ ಪಶ್ಚಿಮ ಬಂಗಾಳದ 80% ದಷ್ಟು ಗ್ರಾಮೀಣ ಮುಸ್ಲಿಂ ಕುಟುಂಬಗಳ ಗರಿಷ್ಟ ಮಾಸಿಕ ಆದಾಯ 5000 ರೂಪಾಯಿ ಮಾತ್ರ ಎಂಬ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ಈ ಪೈಕಿ 38.3 % ಕುಟುಂಬಗಳ ಆದಾಯ ಕೇವಲ 2500 ರೂಪಾಯಿ ಅಥವಾ ಅದಕ್ಕಿಂತಲೂ ಕಡಿಮೆ ! ರಾಜ್ಯದಲ್ಲಿ 5 ಮಂದಿಯ ಕುಟುಂಬಕ್ಕೆ ಬಡತನ ರೇಖೆಯ ಮಿತಿ ತಿಂಗಳಿಗೆ 5000 ರೂಪಾಯಿ ಆಗಿದೆ. 
ನೊಬೆಲ್ ಪುರಸ್ಕೃತ ಅಮರ್ತ್ಯ ಸೇನ್ ಸ್ಥಾಪಿಸಿದ ಪ್ರತಿಚಿ ಟ್ರಸ್ಟ್, ಗೈಡೆನ್ಸ್ ಗಿಲ್ಡ್ ಹಾಗು ಅಸೋಸಿಯೇಶನ್ ಎಸ್ ಎನ್ ಎ ಪಿ - ಈ ಮೂರು ಸಂಸ್ಥೆಗಳು ಸೇರಿ ಅಧ್ಯಯನ ನಡೆಸಿ ಮಾಡಿರುವ ವರದಿಯಲ್ಲಿ ಈ ಅಂಶಗಳು ಬಯಲಾಗಿವೆ. ಈ ವರದಿ ಫೆಬ್ರವರಿ 2016 ರಲ್ಲಿ ಬಿಡುಗಡೆಯಾಗಿದೆ. 
ರಾಜ್ಯದ ಹೆಚ್ಚು ಮುಸ್ಲಿಂ ಜನಸಂಖ್ಯೆ ಇರುವ 325 ಗ್ರಾಮಗಳು ಹಾಗು 73 ನಗರ ಪ್ರದೇಶಗಳಲ್ಲಿ ಸಾಕ್ಷರತೆ, ಆರ್ಥಿಕ ಬೆಳವಣಿಗೆ, ಆರೋಗ್ಯ ಹಾಗು ಶಿಕ್ಷಣ ರಂಗಗಳಲ್ಲಿ  ಸಮೀಕ್ಷೆ ನಡೆಸಿ ಈ ವರದಿ ರಚಿಸಲಾಗಿದೆ. ಈ ಮೂಲಕ ಅಲ್ಪಸಂಖ್ಯಾತರ ಅಭಿವೃದ್ಧಿಯಲ್ಲಿ ಎಡರಂಗ ಹಾಗು ಆ ಬಳಿಕ ಬಂದ ತೃಣಮೂಲ ಎರಡೂ ಪಕ್ಷಗಳು ಸಂಪೂರ್ಣವಾಗಿ ವಿಫ಼ಲವಾಗಿವೆ ಎಂಬುದು ಸ್ಪಷ್ಟವಾಗಿದೆ. 
ಆ ವರದಿಯ ಕೆಲವು ಮುಖ್ಯಾಂಶಗಳು ಇಲ್ಲಿವೆ : 
ಪಶ್ಚಿಮ ಬಂಗಾಳದಲ್ಲಿ ಕೇವಲ 1.5 % ಗ್ರಾಮೀಣ ಮುಸ್ಲಿಮರು ಖಾಸಗಿ ಕ್ಷೇತ್ರದಲ್ಲಿ ನಿಯಮಿತ ಸಂಬಳದ ಉದ್ಯೋಗದಲ್ಲಿದ್ದಾರೆ. 
ಸರಕಾರಿ ನಿಯಮಿತ ವೇತನದ  ಉದ್ಯೋಗಗಳಲ್ಲಿರುವ  ಮುಸ್ಲಿಮರ ಪ್ರಮಾಣ 1 % ಕ್ಕಿಂತಲೂ ಕಡಿಮೆ 
13.2 % ಕ್ಕಿಂತ ಹೆಚ್ಚು ಮುಸ್ಲಿಂ ಯುವಜನರಲ್ಲಿ ಮತದಾರರ ಗುರುತು ಚೀಟಿಯೇ ಇಲ್ಲ 
12.2 % ಮುಸ್ಲಿಂ ಮನೆಗಳಲ್ಲಿ ಮಾತ್ರ ಒಳಚರಂಡಿ ವ್ಯವಸ್ಥೆ ಇದೆ .
 
19% ಮುಸ್ಲಿಮರು ನಗರಗಳಿಗೆ ವಲಸೆ ಹೋಗುತ್ತಾರೆ. 
15% ಕ್ಕಿಂತ ಹೆಚ್ಚು 6 ರಿಂದ 14 ವರ್ಷದ ಮುಸ್ಲಿಂ ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ಈ ಪೈಕಿ ಮೂರನೇ ಒಂದರಷ್ಟು ಮಂದಿಗೆ ಶಾಲೆಗೇ ಹೋಗುವ ಆಸಕ್ತಿಯೇ ಇಲ್ಲ ಮತ್ತು " ಶಿಕ್ಷಣದಲ್ಲಿ  ಭವಿಷ್ಯವಿಲ್ಲ" ಎಂದು ಅವರು ತಿಳಿದಿದ್ದಾರೆ. ಶಾಲೆಗೇ ಹೋಗದ 15% ದಲ್ಲಿ 9.1 % ಮಂದಿ ಶಾಲೆಗೇ ಸೇರಲೇ ಇಲ್ಲ ,5.4 % ಮಂದಿ ಮಧ್ಯದಲ್ಲಿ ಶಾಲೆ ಬಿಟ್ಟಿದ್ದಾರೆ. 
ರಾಜ್ಯದಲ್ಲಿ ಪ್ರತಿ ಒಂದು ಲಕ್ಷ ಜನರಿಗೆ 10.6 ಹಿರಿಯ ಪ್ರಾಥಮಿಕ ಹಾಗು ಪ್ರೌಡ ಶಾಲೆಗಳಿವೆ. ಆದರೆ ಮುಸ್ಲಿಂ ಬಾಹುಳ್ಯವಿರುವ ಮೂರು ಜಿಲ್ಲೆಗಳಾದ ಮುರ್ಷಿದಾಬಾದ್, ಮಾಲ್ಡಾ ಹಾಗು ನಾರ್ತ್ ದಿನಜ್ ಪುರ್ ಗಳಲ್ಲಿ ಈ ಪ್ರಮಾಣ ಕ್ರಮವಾಗಿ ಕೇವಲ 7.2 %, 8.5 % ಹಾಗು 6.2 % ಇದೆ. 
ರಾಜ್ಯದ 82.1 % ಮುಸ್ಲಿಮರು ಕೇವಲ " ಸ್ಥಳೀಯ ತಿಳಿದಿರುವ ವ್ಯಕ್ತಿಯಿಂದ " ಮಾಹಿತಿ ಪಡೆಯುತ್ತಾರೆ. ರೇಡಿಯೋ , ಪತ್ರಿಕೆ ಹಾಗು ಟಿವಿಗಳಿಂದ ಮಾಹಿತಿ ಪಡೆಯುವುದು ಅವರಿಗೆ ಗೊತ್ತೇ ಇಲ್ಲ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News