ಭಾರತ- ಅಮೆರಿಕ ‘ಫುಲ್‌ಬ್ರೈಟ್-ಕಲಾಮ್ ಕ್ಲೈಮೇಟ್ ಫೆಲೋಶಿಪ್’
ವಾಶಿಂಗ್ಟನ್, ಮಾ. 12: ಹವಾಮಾನ ಬದಲಾವಣೆ ಕುರಿತ ದ್ವಿಪಕ್ಷೀಯ ಸಹಕಾರವನ್ನು ಮುಂದುವರಿಸಿಕೊಂಡು ಹೋಗುವ ನೂತನ ಕ್ರಮವಾಗಿ ಭಾರತ ಮತ್ತು ಅಮೆರಿಕಗಳು ‘ಫುಲ್‌ಬ್ರೈಟ್-ಕಲಾಮ್ ಕ್ಲೈಮೇಟ್ ಫೆಲೋಶಿಪ್’ ಆರಂಭಿಸಿವೆ. ಇದರಿಂದ ಭಾರತದ ಸಂಶೋಧನಾ ವಿದ್ವಾಂಸರು ಹವಾಮಾನ ಬದಲಾವಣೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಅಮೆರಿಕದ ಸಂಸ್ಥೆಗಳಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತದೆ.
ಫೆಲೋಶಿಪ್‌ಗೆ ಉಭಯ ಸರಕಾರಗಳು ಜಂಟಿಯಾಗಿ ಹಣಕಾಸು ಪೂರೈಸುತ್ತವೆ. ಫೇಲೋಶಿಪ್ ಪಡೆಯಲು ಅರ್ಜಿಗಳನ್ನು ಸಲ್ಲಿಸುವಂತೆ ಮೊದಲ ಪ್ರಕಟನೆಯನ್ನು ಶುಕ್ರವಾರ ನೀಡಲಾಗಿದೆ.
ಈ ಕಾರ್ಯಕ್ರಮದಡಿ ಆರರವರೆಗಿನ ಭಾರತೀಯ ಪಿಎಚ್‌ಡಿ ವಿದ್ಯಾರ್ಥಿಗಳು ಮತ್ತು ಡಾಕ್ಟರೇಟೋತ್ತರ ಸಂಶೋಧಕರು 6ರಿಂದ 12 ತಿಂಗಳ ಅವಧಿಯವರೆಗೆ ಅಮೆರಿಕದ ಆತಿಥೇಯ ಸಂಸ್ಥೆಗಳಲ್ಲಿ ಕೆಲಸ ಮಾಡಬಹುದಾಗಿದೆ ಎಂದು ಪತ್ರಿಕಾ ಹೇಳಿಕೆಯೊಂದು ತಿಳಿಸಿದೆ.
ಭಾರತದ ದಿವಂಗತ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂರ ಹೆಸರಿನಲ್ಲಿ ಫೆಲೋಶಿಪ್ ಸ್ಥಾಪಿಸಲಾಗಿದೆ. ಉಭಯ ದೇಶಗಳಲ್ಲಿನ ಹವಾಮಾನ ಬದಲಾವಣೆ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು ದೀರ್ಘಾವಧಿ ಸಾಮರ್ಥ್ಯವನ್ನು ನಿರ್ಮಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ವ್ಯಕ್ತಪಡಿಸಿದ ಬದ್ಧತೆಯ ಭಾಗ ಇದಾಗಿದೆ.