×
Ad

ವಿಶ್ವಸಂಸ್ಥೆ ಸಮಾವೇಶಕ್ಕೆ ದಲಾಯಿ ಲಾಮಾಗೆ ಆಹ್ವಾನ, ಚೀನಾ ತೀವ್ರ ಪ್ರತಿಭಟನೆ

Update: 2016-03-12 20:38 IST

ಬೀಜಿಂಗ್, ಮಾ. 12: ಜಿನೇವದಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಸಮಾವೇಶಕ್ಕೆ ದಲಾಯಿ ಲಾಮಾರನ್ನು ಆಹ್ವಾನಿಸಿರುವುದಕ್ಕಾಗಿ ಚೀನಾ ವಿಶ್ವಸಂಸ್ಥೆಗೆ ಪ್ರತಿಭಟನೆ ಸಲ್ಲಿಸಿದೆ. ಟಿಬೆಟ್‌ನ ಆಧ್ಯಾತ್ಮಿಕ ನಾಯಕ ಪ್ರತ್ಯೇಕತಾವಾದಿಯಾಗಿದ್ದು, ಮಾನವಹಕ್ಕುಗಳ ಬಗ್ಗೆ ಮಾತನಾಡುವ ಅರ್ಹತೆ ಹೊಂದಿಲ್ಲ ಎಂದು ಅದು ಹೇಳಿದೆ.
ಈಗ ನಡೆಯುತ್ತಿರುವ ವಿಶ್ವಸಂಸ್ಥೆಯ ಮಾನವಹಕ್ಕುಗಳ ಸಮಾವೇಶದ ನೇಪಥ್ಯದಲ್ಲಿ ನಡೆಯುವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವಂತೆ ದಲಾಯಿ ಲಾಮಾರಿಗೆ ಆಹ್ವಾನ ನೀಡಲಾಗಿರುವುದನ್ನು ಸ್ಮರಿಸಬಹುದಾಗಿದೆ.
ಇದಕ್ಕೆ ಚೀನಾ ‘‘ತೀವ್ರ ಅತೃಪ್ತಿ’’ಯನ್ನು ವ್ಯಕ್ತಪಡಿಸಿದೆ ಹಾಗು ಔಪಚಾರಿಕ ಪ್ರತಿಭಟನೆಯನ್ನು ಸಲ್ಲಿಸಿದೆ.
ಜಿನೇವದಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಯ 31ನೆ ಅಧಿವೇಶನದ ನೇಪಥ್ಯದಲ್ಲಿ, ನೊಬೆಲ್ ಶಾಂತಿ ಪ್ರಶಸ್ತಿ ವಿಜೇತರಿಗೆ ಸಂಬಂಧಿಸಿದ ಸಮ್ಮೇಳನವೊಂದನ್ನು ಅಮೆರಿಕ ಮತ್ತು ಕೆನಡ ಜಂಟಿಯಾಗಿ ಆಯೋಜಿಸಿವೆ ಎಂದು ವರದಿಗಳು ತಿಳಿಸಿವೆ.
ದಲಾಯಿ ಲಾಮಾ ಭಾಗವಹಿಸಿದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವಸಂಸ್ಥೆಯ ಮಾನವಹಕ್ಕುಗಳ ಉಪ ಹೈಕಮಿಶನರ್ ಕೇಟ್ ಗಿಲ್ಮೋರ್ ವಹಿಸಿದ್ದರು.
ಚೀನಾದ ತೀವ್ರ ಪ್ರತಿರೋಧದ ಹೊರತಾಗಿಯೂ, ಟಿಬೆಟ್‌ನ ಆಧ್ಯಾತ್ಮಿಕ ನಾಯಕರನ್ನು ಸಮಾವೇಶಕ್ಕೆ ಕರೆಸಲು ಪಟ್ಟು ಹಿಡಿದಿತ್ತು ಎಂದು ಹೇಳಿಕೆಯೊಂದರಲ್ಲಿ ಚೀನಾ ವಿದೇಶ ಸಚಿವಾಲಯದ ವಕ್ತಾರ ಹೊಂಗ್ ಲೀ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News