ಭಾರೀ ಪ್ರತಿಭಟನೆ; ಪರ-ವಿರೋಧಿಗಳ ನಡುವೆ ಹೊಯ್‌ಕೈ
ಶಿಕಾಗೊ, ಮಾ. 12: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಆಕಾಂಕ್ಷಿಯಾಗಿರುವ ಡೊನಾಲ್ಡ್ ಟ್ರಂಪ್ ಶುಕ್ರವಾರ ರಾತ್ರಿ ಶಿಕಾಗೊದಲ್ಲಿ ನಡೆಯಬೇಕಾಗಿದ್ದ ತನ್ನ ಪ್ರಚಾರ ಸಭೆಯನ್ನು ರದ್ದುಗೊಳಿಸಿದ್ದಾರೆ. ಟ್ರಂಪ್ ಪರ ಮತ್ತು ವಿರೋಧಿಗಳ ನಡುವೆ ಸಂಘರ್ಷ ಏರ್ಪಟ್ಟು ಸಭೆ ನಡೆಯಬೇಕಾಗಿದ್ದ ಸ್ಥಳ ಯುದ್ಧಭೂಮಿಯಾಗಿ ಮಾರ್ಪಟ್ಟ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.
ಸಭೆ ಆರಂಭವಾಗಬೇಕಿದ್ದ ಸಮಯಕ್ಕಿಂತ ಅರ್ಧ ಗಂಟೆ ಬಳಿಕ ವೇದಿಕೆಯಲ್ಲಿ ಕಾಣಿಸಿಕೊಂಡ ಟ್ರಂಪ್‌ರ ಪ್ರಚಾರ ಸಿಬ್ಬಂದಿಯೊಬ್ಬರು, ಸುರಕ್ಷತೆ ಕಾರಣಗಳಿಗಾಗಿ ಸಭೆಯನ್ನು ಮುಂದೂಡಲಾಗಿದೆ ಎಂದು ಘೋಷಿಸಿದರು.
ಈ ಪ್ರಚಾರ ಸಭೆಯನ್ನು ಇನ್ನೊಂದು ದಿನ ನಡೆಸಲಾಗುವುದು ಎಂದು ಬಳಿಕ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ಟ್ರಂಪ್‌ರ ಪ್ರಚಾರ ತಂಡ ತಿಳಿಸಿದೆ.
ಈ ಹೇಳಿಕೆಯ ಬಳಿಕ, ಅಲ್ಲಿ ಸೇರಿದ ಜನರು ಹರ್ಷ ವ್ಯಕ್ತಪಡಿಸಿದರು ಹಾಗೂ ಘೋಷಣೆಗಳನ್ನು ಕೂಗಿದರು. ಆಗ ಜನರ ಗುಂಪುಗಳ ನಡುವೆ ಮಾರಾಮಾರಿ ಸಂಭವಿಸಿತು. ಪೊಲೀಸರು ಮಧ್ಯಪ್ರವೇಶಿಸಿ ಅಲ್ಲಿಂದ ಜನರನ್ನು ಚದುರಿಸಿದರು.
‘‘ವೀ ಡಂಪ್ಡ್ ಟ್ರಂಪ್! ವೀ ಡಂಪ್ಡ್ ಟ್ರಂಪ್! (ನಾವು ಟ್ರಂಪ್‌ರನ್ನು ಹೊರದಬ್ಬಿದೆವು!)’’ ಎಂಬ ಕೂಗು ಸಭೆ ನಡೆಯಬೇಕಿದ್ದ ಶಿಕಾಗೊ ಪೆವಿಲಿಯನ್‌ನಲ್ಲಿರುವ ಇಲಿನಾಯಿಸ್ ವಿಶ್ವವಿದ್ಯಾನಿಲಯದ ಒಳಗಿನಿಂದ ಮೊಳಗಿತು.
ಇದಕ್ಕೆ ಪ್ರತಿಯಾಗಿ, ‘‘ವೀ ವಾಂಟ್ ಟ್ರಂಪ್! ವೀ ವಾಂಟ್ ಟ್ರಂಪ್! (ನಮಗೆ ಟ್ರಂಪ್ ಬೇಕು)’’ ಎಂಬ ಘೋಷಣೆಯೂ ಕೇಳಿಬಂತು.
ಪೆವಿಲಿಯನ್‌ನ ಹೊರಗೆ, ಸಭೆ ರದ್ದುಗೊಂಡ ಸುದ್ದಿ ಕೇಳಿದ ಜನರು, ‘‘ವೀ ಶಟ್ ಇಟ್ ಡೌನ್! (ನಾವು ಇದನ್ನು ಮುಚ್ಚುತ್ತೇವೆ!)’’ ಎಂಬ ಘೋಷಣೆಗಳನ್ನು ಕೂಗಿದರು.
ಶಿಕಾಗೊಗೆ ಆಗಮಿಸಿದ ಬಳಿಕ ಪೊಲೀಸರೊಂದಿಗೆ ಸಮಾಲೋಚನೆ ನಡೆಸಿದ ಟ್ರಂಪ್, ಸಭೆಯನ್ನು ಮುಂದೂಡುವ ನಿರ್ಧಾರವನ್ನು ತೆಗೆದುಕೊಂಡರು ಎಂದು ಅವರ ಪ್ರಚಾರ ಸಿಬ್ಬಂದಿ ತಿಳಿಸಿದರು.
ಒಂದು ವಾರದ ತಯಾರಿ!ಟ್ರಂಪ್‌ರ ಶಿಕಾಗೊ ಪ್ರಚಾರ ಸಭೆಯನ್ನು ಹೇಗೆ ನಿಲ್ಲಿಸುವುದು ಎಂಬ ಬಗ್ಗೆ ಶಿಕಾಗೊದ ಕಾರ್ಯಕರ್ತರು ಒಂದು ವಾರ ಹಿಂದಿನಿಂದಲೇ ತಯಾರಿ ಆರಂಭಿಸಿದ್ದರು. ‘ಶೋಯಿಂಗ್ ಅಪ್ ಫಾರ್ ರೇಶಿಯಲ್ ಜಸ್ಟಿಸ್’ ಎಂಬ ಹೆಸರಿನ ಗುಂಪು ಸ್ಥಳೀಯ ಕಾಲೇಜುಗಳ ಅಲ್ಪಸಂಖ್ಯಾತ ವಿದ್ಯಾರ್ಥಿ ಗುಂಪುಗಳೊಂದಿಗೆ ಸಮನ್ವಯ ಸಾಧಿಸಿದ್ದರು. ‘‘ನನಗೆ ಸಂತೋಷವಾಗಿದೆ. ನಾವು ಒಟ್ಟಾಗಿ ಟ್ರಂಪ್ ಸಭೆಯನ್ನು ನಿಲ್ಲಿಸಿದುದರಿಂದ ನನಗೆ ಸಮಾಧಾನವಾಗಿದೆ’’ ಎಂದು ಪ್ರತಿಭಟನಾ ಕಾರ್ಯಕ್ರಮದ ಓರ್ವ ಸಂಘಟಕ ಶಿಕಾಗೊದ ಇಲಿನಾಯಿಸ್ ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿನ್ಯಾತನಿಯಲ್ ಲೂಯಿಸ್ ಹೇಳಿದರು.
ಸೇಂಟ್ ಲೂಯಿಸ್ ಸಭೆಯಲ್ಲೂ ಪ್ರತಿಭಟನೆ
ಶಿಕಾಗೊದಲ್ಲಿ ಪ್ರಚಾರ ಸಭೆ ರದ್ದಾಗುವ ಮೊದಲು ಸೇಂಟ್ ಲೂಯಿಸ್‌ನ ಒಪೇರ ಹೌಸ್‌ನಲ್ಲಿ ನಡೆದ ಟ್ರಂಪ್ ಸಭೆಯಲ್ಲಿ ಪ್ರತಿಭಟನಕಾರರು ಎಂಟು ಬಾರಿ ತಡೆಯೊಡ್ಡಿದರು.
ಮಧ್ಯಪ್ರವೇಶಿಸಿದ ಪೊಲೀಸರು ಪ್ರತಿಭಟನಕಾರರನ್ನು ಹೊರ ತಳ್ಳಿದರು.
ಹೊರಗೆ ಟ್ರಂಪ್ ಬೆಂಬಲಿಗರು ಮತ್ತು ವಿರೋಧಿಗಳ ನಡುವೆ ಘರ್ಷಣೆ ನಡೆದು ಹಲವಾರು ಮಂದಿ ಗಾಯಗೊಂಡರು.