ಫೋನ್ ಮುಟ್ಟಬೇಡ ಎಂದದ್ದಕ್ಕೆ ಬೆರಳನ್ನೇ ಕತ್ತರಿಸಿಕೊಂಡ ಬಾಲಕ
ನ್ಯೂಯಾರ್ಕ್, ಮಾ. 12: ಮಕ್ಕಳು ಸ್ಮಾರ್ಟ್‌ಫೋನ್‌ಗಳ ದಾಸರಾಗುತ್ತಿರುವುದನ್ನು ಕಂಡು, ಫೋನ್ ಮುಟ್ಟಬೇಡ ಎಂಬುದಾಗಿ ಹೆತ್ತವರು ತಮ್ಮ ಮಕ್ಕಳಿಗೆ ಹೇಳುವುದು ಮಾಮೂಲಿ. ಆದರೆ, ಚೀನಾದ 11 ವರ್ಷದ ಬಾಲಕನೊಬ್ಬ ಹೆತ್ತವರ ಈ ಬುದ್ಧಿವಾದಕ್ಕೆ ತೀರಾ ಅತಿರೇಕವಾಗಿ ಪ್ರತಿಕ್ರಿಯಿಸಿದ್ದಾನೆ.
ಹೆತ್ತವರೊಂದಿಗೆ ಜಗಳವಾಡಿದ ಆತ ಪ್ರತಿಭಟನೆಯ ವಿಧಾನವಾಗಿ ತನ್ನ ಬಲಗೈ ತೋರು ಬೆರಳನ್ನೇ ಕತ್ತರಿಸಿಕೊಂಡಿದ್ದಾನೆ.
‘‘ಈ ಬಾಲಕ ಬೆಳಗ್ಗೆ ಎದ್ದು ತನ್ನ ಫೋನನ್ನು ಎತ್ತಿಕೊಂಡನು. ಫೋನ್ ಕೆಳಗಿಡಲು ತಾಯಿ ಹೇಳಿದಾಗ ಆತ ನಿರಾಕರಿಸಿದನು. ತಾಯಿ ಮತ್ತು ಮಗನ ನಡುವೆ ಜಗಳ ಸಂಭವಿಸಿತು. ಬಳಿಕ ಇದೇ ವಿಷಯದಲ್ಲಿ ತಂದೆಯೊಂದಿಗೂ ಜಗಳವಾಯಿತು’’ ಎಂದು ‘ಗೀಕ್.ಕಾಮ್’ ವರದಿ ಮಾಡಿದೆ.
ತನ್ನ ತಂದೆ ತಾಯಿಯರೊಂದಿಗಿನ ಜಗಳದಿಂದ ಬಾಲಕ ಎಷ್ಟು ಹತಾಶನಾದನೆಂದರೆ, ಅಡುಗೆ ಮನೆಗೆ ಹೋದ ಬಾಲಕ ಚಾಕು ಎತ್ತಿಕೊಂಡು ತನ್ನ ತೋರು ಬೆರಳಿನ ತುದಿಯನ್ನೇ ಕೊಯ್ದನು. ಬಾಲಕನನ್ನು ಕತ್ತರಿಸಿದ ಬೆರಳ ಭಾಗದೊಂದಿಗೆ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರಿಗೆ ಕತ್ತರಿಸಿದ ಬೆರಳ ತುಂಡನ್ನು ಜೋಡಿಸಲು ಮೂರು ಗಂಟೆಗಳು ಬೇಕಾಯಿತು ಎಂದು ಅದು ಹೇಳಿದೆ.