ಸಿಬಿಐ ವಿವರಣೆ ತಪ್ಪು ಮುಚ್ಚಿ ಹಾಕುವ ತಂತ್ರ: ಕಾಂಗ್ರೆಸ್
ಹೊಸದಿಲ್ಲಿ, ಮಾ.12: ವಿವಾದಿತ ಉದ್ಯಮಿ ವಿಜಯ ಮಲ್ಯರಿಗೆ ಲುಕೌಟ್ ನೋಟಿಸನ್ನು ತಪ್ಪಾಗಿ ನೀಡಲಾಗಿತ್ತೆಂಬ ಸಿಬಿಐಯ ‘ಅತಿ ವಿಚಿತ್ರ ವಿವರಣೆಯನ್ನು’ ಪಾರಾಗುವ ನೆಪವೆಂದು ಇಂದು ಹೇಳಿರುವ ಕಾಂಗ್ರೆಸ್, ಕೇಂದ್ರದ ಮೇಲೆ ಮತ್ತೊಂದು ಪ್ರಹಾರ ನಡೆಸಿದೆ.
ತಾವು ಸರಕಾರಿ ಅಧಿಕಾರಿಗಳು, ಅಂದರೆ ಸಿಬಿಐಯ ಉನ್ನತ ಮಟ್ಟದಿಂದ ಬಂದಿರುವ ಅತ್ಯಂತ ವಿಚಿತ್ರ ವಿವರಣೆಯನ್ನು ಕೇಳುತ್ತಿದ್ಧೇವೆ. ಪ್ರಮಾದದಿಂದಾಗಿ ಲುಕೌಟ್ ನೋಟಿಸ್ ಜಾರಿಗೊಳಿಸಲಾಯಿತೆಂದು ಅವರು ಹೇಳುತ್ತಿದ್ದಾರೆ. ಇದು ಮಕ್ಕಳಾಟವಲ್ಲ. ಅವರು ಪ್ರಮಾದದಿಂದ ನೋಟಿಸ್ ನೀಡಿಲ್ಲ ಅಥವಾ ಹಿಂದೆಗೆದಿಲ್ಲವೆಂದು ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ಪತ್ರಕರ್ತರೊಡನೆ ಹೇಳಿದರು.
ಅಂತಹ ನೋಟಿಸ್‌ಗಳು ದೇಶದ ಗಡಿಯೊಳಗಷ್ಟೇ ಸೀಮಿತವಲ್ಲವೆಂದು ಉಲ್ಲೇಖಿಸಿದ ಅವರು, ಅವು ಅದರಾಚೆಗೂ ಹೋಗುತ್ತವೆ. ಇಂಟರ್‌ಪೋಲ್ ನಿಯಮಗಳೊಳಗೆ ಸಂಬಂಧ ಪಡೆಯುತ್ತದೆ ಹಾಗೂ ವಿಶ್ವಾದ್ಯಂತ ಆವರ್ತಿಸಲಾಗುತ್ತದೆ ಎಂದರು. ಸಿಬಿಐಯ ಅಂತಹ ನೋಟಿಸನ್ನು ಪ್ರಮಾದದಿಂದ ಹೊರಡಿಸಲು ಹೇಗೆ ಸಾಧ್ಯ? ಯಾರ ಮೇಲಾದರೂ ಯಾವುದೇ ಶಿಸ್ತು ಕ್ರಮ ಕೈಗೊಳ್ಳಲಾಗಿದೆಯೇ? ತಪ್ಪು ನೋಟಿಸ್‌ಎನ್ನಲಾಗಿರುವುದನ್ನು ಹಿಂಪಡೆದವರು ಯಾರು? ಸಿಬಿಐ ನಿರ್ದೇಶಕರೋ ಅಥವಾ ಇಲಾಖೆಯ ಪ್ರಭಾರಿ- ಸಚಿವರು ಅಂದರೆ ಪ್ರಧಾನಿಯೇ ಎಂದು ಸಿಂಘ್ವಿ ಪ್ರಶ್ನಿಸಿದರು. ಅಂತಹ ವಿವರಣೆಯಿಂದ ಉತ್ತರಕ್ಕಿಂತ ಹೆಚ್ಚು ಪ್ರಶ್ನೆಗಳೇ ಏಳುತ್ತವೆ ಎಂದು ಒತ್ತಿ ಹೇಳಿದ ಅವರು, ಇಂತಹ ನಿಗೂಢ, ವಿಚಿತ್ರ ವಿವರಣೆ ಹೊರ ಬಂದಿರುವುದು ದುರಂತವಲ್ಲದಿದ್ದರೂ ಹಾಸ್ಯಾಸ್ಪದ ಎಂದರು.