ಗೃಹಸಚಿವ ರಾಜ್‌ನಾಥ್ ಸಿಂಗ್ ಮುಂದೆಯೇ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದ ರವಿಶಂಕರ್ ಗುರೂಜಿ!
ಹೊಸದಿಲ್ಲಿ, ಮಾ.13: ಇಲ್ಲಿನ ಯಮುನಾ ನದಿ ಕಿನಾರೆಯಲ್ಲಿ ನಡೆಯುತ್ತಿರುವ ಶ್ರೀ ಶ್ರೀ ರವಿಶಂಕರ್ ಗುರೂಜಿಯವರ ವರ್ಲ್ಡ್ ಕಲ್ಚರ್ ಫೆಸ್ಟಿವಲ್ ಕಾರ್ಯಕ್ರಮದಲ್ಲಿ ಶನಿವಾರ ಕೇಂದ್ರ ಗೃಹಸಚಿವ ರಾಜ್‌ನಾಥ್ ಸಿಂಗ್ ಸಮ್ಮುಖದಲ್ಲೇ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ ಕೂಗಿದ ಘಟನೆ ನಡೆದಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಶನಿವಾರ ಕೇಂದ್ರ ಗೃಹಸಚಿವ ರಾಜ್‌ನಾಥ್ ಸಿಂಗ್ ಹಾಗೂ ವಿದೇಶಾಂಗ ವ್ಯವಹಾರ ಖಾತೆ ಸಚಿವೆ ಸುಷ್ಮ್ಮಾ ಸ್ವರಾಜ್ ಅವರು ವರ್ಲ್ಡ್ ಕಲ್ಚರ್ ಫೆಸ್ಟಿವಲ್‌ನಲ್ಲಿ ಭಾಗವಹಿಸಿ ಭಾರತದ ಜಾತ್ಯತೀತತೆ ಹಾಗೂ ವೈವಿಧ್ಯತೆ ಇಡೀ ಜಗತ್ತಿಗೆ ಮಾದರಿ ಎಂದು ಕೊಂಡಾಡಿದರು. ಆದರೆ ಈ ಸಂದರ್ಭದಲ್ಲಿ ಸಭಿಕರ ನಡುವೆ ಪಾಕಿಸ್ತಾನದ ಧ್ವಜಗಳು ಹಾರಾಡಿದವು ಹಾಗೂ ಸ್ವತಃ ರವಿಶಂಕರ್ ಗುರೂಜಿವಯರೇ ‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ ಕೂಗಿದ್ದು, ತೀವ್ರ ವಿವಾದಕ್ಕೆ ಕಾರಣವಾಗಿದೆ. ಪಾಕಿಸ್ತಾನದ ಧಾರ್ಮಿಕ ವಿದ್ವಾಂಸ ಮುಫ್ತಿ ಮುಹಮ್ಮದ್ ಸಯೀದ್ ಖಾನ್ ಅವರು ತಮ್ಮ ಉಪನ್ಯಾಸವನ್ನು ಮುಗಿಸಿದ ಕೂಡಲೇ ಅವರ ಜೊತೆ ಸೇರಿದ ರವಿಶಂಕರ್ ಗುರೂಜಿ,ಜೈ ಹಿಂದ್, ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದರು. ಬಳಿಕ ಅದನ್ನು ಸಮರ್ಥಿಸಿಕೊಂಡ ಅವರು, ಜಿಂದಾಬಾದ್ ಎನ್ನುವುದು ಎರಡು ದೇಶಗಳ ವಿಜಯದ ಸಂಕೇತವಾಗಿದೆ ಎಂದು ಹೇಳಿದರು. ಆದರೆ ಕೇಂದ್ರ ಗೃಹಸಚಿವ ಮುಂದೆಯೇ ಪಾಕ್ ಪರ ಘೋಷಣೆ ಕೂಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.