ನನಗೂ ಪ್ರಧಾನಿಯಾಗಬೇಕಿದೆ, ನಾನೂ ಚಾ ಮಾರಬೇಕೆ?: ಆಝಂ ಖಾನ್
ಆಗ್ರಾ, ಮಾರ್ಚ್. 13: ಉತ್ತರ ಪ್ರದೇಶ ನಗರಾಭಿವೃದ್ಧಿ ಸಚಿವ ಆಝಂ ಖಾನ್ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್‌ರನ್ನು ರಾಷ್ಟ್ರ ಭಕ್ತ ಎಂದು ಹೇಳಿದ್ದಾರೆ. ಯಾರೂ ಆರೆಸ್ಸೆಸ್‌ನಿಂದ ರಾಷ್ಟ್ರಭಕ್ತಿಯನ್ನು ಕಲಿಯಬೇಕಿಲ್ಲ ಎಂದ ಅವರು ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾರ ದೇಶ ಪ್ರೇಮವನ್ನು ಸಂದೇಹಿಸುವಂತಿಲ್ಲ ಎಂದು ಪತ್ರಕರ್ತರಿಗೆ ತಿಳಿಸಿದ್ದಾರೆ.
ಈ ದಿನಗಳಲ್ಲಿ ಭಗವಾನ್ ಕೃಷ್ಣನ ರೀತಿ ಕನ್ಹಯ್ಯಾ ತನ್ನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅವರು ಕೇಂದ್ರದ ನರೇಂದ್ರ ಮೋದಿ ಸರಕಾರದ ವಾಸ್ತವಿಕತೆಗಳನ್ನು ಬಯಲಿಗೆಳೆಯುತ್ತಿದ್ದಾರೆ. ದೇಶಕ್ಕೆ ದೇಶಪ್ರೇಮವನ್ನು ಆರೆಸ್ಸೆಸ್‌ನಿಂದ ಕಲಿಯುವ ಯಾವ ಆವಶ್ಯಕತೆಯೂ ಇಲ್ಲ. ಮೋದಿ ತನ್ನ ಹೆಚ್ಚಿನ ಸಭೆಗಳಲ್ಲಿ ಒಬ್ಬ ಚಾಮಾರುವವ ಪ್ರಧಾನಿಯಾಗಬಹುದೆಂದು ಹೇಳುತ್ತಿರುತ್ತಾರೆ. ನಾನೂ ಪ್ರಧಾನಿಯಾಗಲು ಬಯಸುತ್ತಿದ್ದೇನೆ. ಅದಕ್ಕಾಗಿ ನಾನು ಚಾ ಮಾರಬೇಕಿದೆಯೇ ಎಂದು ಆಝಂ ಖಾನ್ ವ್ಯಂಗ್ಯವಾಡಿದ್ದಾರೆ.
ಬಾಬರಿ ಮಸೀದಿ ಧ್ವಂಸಕ್ಕೆ ಬಿಜೆಪಿ ಕಾರಣವಾಗಿದೆ. ದೇಶವು ಬಾಬರಿ ಮಸೀದಿ ಕೆಡವಿದ್ದಕ್ಕಾಗಿ ಭಾರಿ ಬೆಲೆ ತೆರಬೇಕಾಗಿ ಬಂದಿದೆ ಎಂದ ಅವರು ಹೈದರಾಬಾದ್ ಶಾಸಕ ಅಕ್ಬರುದ್ದೀನ್ ಉವೈಸಿಯ ಎಮ್‌ಐಎಮ್ ಉತ್ತರ ಪ್ರದೇಶದ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಅವರು ಹೈದರಾಬಾದ್ ಬಿರಿಯಾನಿ ಮಾಡಲಿ ಮತ್ತು ತಿನ್ನಲಿ ಉತ್ತರ ಪ್ರದೇಶವನ್ನು ಮರೆತು ಬಿಡಲಿ ಎಂದು ಆಝಂಖಾನ್ ಪ್ರತಿಕ್ರಿಯಿಸಿದ್ದಾರೆ.