ಮೋದಿ ಸಂಪುಟಕ್ಕಿಂತ ಹೆಚ್ಚಿನ ಸಿಖ್ ಸಚಿವರು ನನ್ನಲ್ಲಿದ್ದಾರೆ: ಕೆನಡ ಪ್ರಧಾನಿ
ವಾಶಿಂಗ್ಟನ್, ಮಾ. 13: ನರೇಂದ್ರ ಮೋದಿ ಸಂಪುಟದಲ್ಲಿರುವುದಕ್ಕಿಂತ ಹೆಚ್ಚಿನ ಸಿಖ್ಖರು ತನ್ನ ಸಚಿವ ಸಂಪುಟದಲ್ಲಿದ್ದಾರೆ ಎಂದು ಕೆನಡ ಪ್ರಧಾನಿ ಜಸ್ಟಿನ್ ಟ್ರೂಡೊ ಇಲ್ಲಿನ ಸಭೆಯೊಂದರಲ್ಲಿ ಶನಿವಾರ ಹೇಳಿದರು.
ಅಮೆರಿಕಕ್ಕೆ ನೀಡಿರುವ ಅಧಿಕೃತ ಪ್ರವಾಸದ ವೇಳೆ ಇಲ್ಲಿನ ಅಮೆರಿಕನ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ 10 ಪ್ರಶ್ನೆಗಳಿಗೆ ಉತ್ತರಿಸುತ್ತಾ ಟ್ರೂಡೊ ಹೇಳಿದರು.
ವಿಶ್ವವಿದ್ಯಾಲಯದಲ್ಲಿ ಅರ್ಧ ಗಂಟೆ ನಡೆದ ಕಾರ್ಯಕ್ರಮದ ವೇಳೆ, ಪಾಕಿಸ್ತಾನದ ಪಂಜಾಬ್ ಪ್ರಾಂತದ ಜಹಾನ್ ಎಂಬ ವಿದ್ಯಾರ್ಥಿನಿ, ತಮ್ಮ ಸಂಪುಟದಲ್ಲಿ ಇಷ್ಟೊಂದು ಸಂಖ್ಯೆಯ ಪಂಜಾಬಿಗಳನ್ನು ನೋಡಲು ಹೆಮ್ಮೆಯೆನಿಸುತ್ತಿದೆ ಎಂದು ಹೇಳಿದರು.
‘‘ನನ್ನ ಸಂಪುಟದಲ್ಲಿ ಮೋದಿಗಿಂತ ಹೆಚ್ಚಿನ ಸಂಖ್ಯೆಯ ಸಿಖ್ಖರಿದ್ದಾರೆ’’ ಎಂದು ಟ್ರೂಡೊ ಹೇಳಿರುವುದಾಗಿ ಕೆನಡದ ದೈನಿಕ ‘ದ ಸ್ಟಾರ್’ ವರದಿ ಮಾಡಿದೆ.
ಕಳೆದ ವರ್ಷದ ನವೆಂಬರ್‌ನಲ್ಲಿ ಅಧಿಕಾರ ವಹಿಸಿಕೊಂಡಿರುವ 44 ವರ್ಷದ ಟ್ರೂಡೊ, ತನ್ನ ಸಚಿವ ಸಂಪುಟದಲ್ಲಿ ನಾಲ್ವರು ಸಿಖ್ ಕೆನಡಿಯನ್ನರನ್ನು ಸೇರಿಸಿಕೊಂಡು ಅಚ್ಚರಿ ಹುಟ್ಟಿಸಿದ್ದಾರೆ.
ರಕ್ಷಣಾ ಸಚಿವ ಹರ್ಜಿತ್ ಸಜ್ಜನ್, ಮೂಲಸೌಕರ್ಯ ಸಚಿವ ಅಮರ್‌ಜೀತ್ ಸೋಹಿ, ಸಣ್ಣ ಉದ್ದಿಮೆಗಳ ಸಚಿವ ಬಾರ್ದಿಶ್ ಚಗ್ಗರ್ ಮತ್ತು ಹೊಸತನದ ಹುಡುಕಾಟದ ಸಚಿವ ನವದೀಪ್ ಸಿಂಗ್ ಬೈನ್ಸ್- ಟ್ರೂಡೊ ಸಂಪುಟದಲ್ಲಿರುವ ಸಚಿವರು.