ಮಹಿಳೆಯರು ಜಮೀನು ಹಕ್ಕು ಹೊಂದಿದರೆ ಬಡತನ, ಹಿಂಸೆ ಇಳಿಮುಖ - ವಿಶ್ವಬ್ಯಾಂಕ್
ನ್ಯೂಯಾರ್ಕ್, ಮಾ. 13: ಮಹಿಳೆಯರು ಭೂಮಿಯ ಹಕ್ಕುಗಳನ್ನು ಹೊಂದಿದರೆ ಬಾಲ್ಯ ವಿವಾಹ ಮತ್ತು ಗೃಹ ಹಿಂಸೆಯ ಪ್ರಮಾಣ ಕಡಿಮೆಯಾಗುವುದೇ?
‘‘ಹೌದು ಮತ್ತು ಇದಷ್ಟೇ ಅಲ್ಲ’’ ಎಂದು ಅಂತಾರಾಷ್ಟ್ರೀಯ ಜಮೀನು ಮತ್ತು ಆಸ್ತಿ ಹಕ್ಕುಗಳ ಪರಿಣತರ ಗುಂಪೊಂದು ಹೇಳುತ್ತದೆ. ಈ ವಾರ ಈ ಗುಂಪು ವಾಶಿಂಗ್ಟನ್‌ನಲ್ಲಿ ಸಭೆ ಸೇರಿ, ಸುಧಾರಿತ ಜಮೀನು ನಿರ್ವಹಣೆ ಜಾಗತಿಕ ಬಡತನವನ್ನು ಹೇಗೆ ಕಡಿಮೆಮಾಡಬಲ್ಲದು ಹಾಗೂ ಅಭಿವೃದ್ಧಿಯನ್ನು ಹೇಗೆ ಸಾಧಿಸಬಲ್ಲದು ಎಂಬ ಬಗ್ಗೆ ಚರ್ಚೆ ನಡೆಸಲಿದೆ.
ಮಹಿಳೆಯರಲ್ಲಿ ಜಮೀನಿನ ಒಡೆತನವಿರುವಾಗ, ಮಕ್ಕಳ ಆರೋಗ್ಯ ಮತ್ತು ಶಿಕ್ಷಣ ಸುಧಾರಿಸುತ್ತದೆ, ಕುಟುಂಬಗಳ ಸಂಪನ್ಮೂಲಗಳು ಹೆಚ್ಚುತ್ತವೆ ಹಾಗೂ ಬಾಲ್ಯ ವಿವಾಹಗಳು ನಡೆಯುವುದಿಲ್ಲ, ಯಾಕೆಂದರೆ ಆರ್ಥಿಕ ಕಾರಣಗಳಿಗಾಗಿ ಹೆಣ್ಣು ಮಕ್ಕಳನ್ನು ಚಿಕ್ಕ ಪ್ರಾಯದಲ್ಲೇ ಮದುವೆ ಮಾಡಿಕೊಡುವ ಅವಶ್ಯಕತೆ ಉಂಟಾಗುವುದಿಲ್ಲ ಎಂಬುದಾಗಿ ಖ್ಯಾತ ಅರ್ಥಶಾಸ್ತ್ರಜ್ಞೆ ಹಾಗೂ ವಿಶ್ವಬ್ಯಾಂಕ್ ಪ್ರಾಯೋಜಿತ ಸಮ್ಮೇಳನದ ಸಂಘಟಕಿ ಕ್ಲಾಸ್ ಡೀನಿಂಗರ್ ಹೇಳುತ್ತಾರೆ.
ಅದೇ ವೇಳೆ, ಜಮೀನು ಹಕ್ಕುಗಳನ್ನು ಹೊಂದಿರುವ ಮಹಿಳೆಯರು ಉಳಿತಾಯ ಖಾತೆಗಳನ್ನು ಹೊಂದುತ್ತಾರೆ ಹಾಗೂ ಇದು ಗೃಹ ಹಿಂಸೆಯ ಪ್ರಮಾಣವನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ.
‘‘ಮಹಿಳೆಯರಲ್ಲಿ ಉತ್ತಮ ಚೌಕಾಸಿ ಸಾಮರ್ಥ್ಯವಿದ್ದರೆ, ಅವರು ಪ್ರತಿಭಟನೆ ತೋರಬಲ್ಲರು. ಗಂಡಂದಿರು ಹೆಂಡತಿಯರಿಗೆ ಹೊಡೆಯುವ ಮೊದಲು ಇನ್ನೊಮ್ಮೆ ಯೋಚನೆ ಮಾಡಬಹುದು. ಯಾಕೆಂದರೆ, ಮಹಿಳೆಯರು ಹೊರ ಹೋದರೆ ತಮ್ಮೆಂದಿಗೆ ಹಣವನ್ನೂ ಕೊಂಡೊಯ್ಯಬಹುದು ಎಂಬ ಭೀತಿ ಗಂಡಂದಿರಲ್ಲಿ ಇರುತ್ತದೆ’’ ಎಂದು ಡೀನಿಂಗರ್ ಹೇಳಿದರು.
ಮಾರ್ಚ್ 14ರಿಂದ 18ರವರೆಗೆ ನಡೆಯಲಿರುವ ವಿಶ್ವಬ್ಯಾಂಕ್ ಜಮೀನು ಮತ್ತು ಬಡತನ ಸಮ್ಮೇಳನದಲ್ಲಿ ಸರಕಾರಗಳು, ಖಾಸಗಿ ಕ್ಷೇತ್ರ, ಶಿಕ್ಷಣ ಕ್ಷೇತ್ರ ಮತ್ತು ಸರಕಾರೇತರ ಸಂಘಟನೆಗಳನ್ನು ಪ್ರತಿನಿಧಿಸುವ ಸುಮಾರು 1,400 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.