ಮೃತ ದೋಷಿಯ ವಾರಸುದಾರರು ದಂಡ ಪಾವತಿಸಲು ಬಾಧ್ಯಸ್ಥರು
ಮುಂಬೈ, ಮಾ. 13: ಮೃತಪಟ್ಟ ದೋಷಿಯ ಕಾನೂನುಸಮ್ಮತ ವಾರಸುದಾರರು ಆತ ಬಿಟ್ಟುಹೋದ ಆಸ್ತಿಯ ಮೂಲಕ ದಂಡಗಳನ್ನು ಹಾಗೂ ಪರಿಹಾರವನ್ನು ಪಾವತಿಸಲು ಬಾಧ್ಯಸ್ಥರಾಗುತ್ತಾರೆಂದು ಬಾಂಬೆ ಹೈಕೋರ್ಟ್ ಶನಿವಾರ ಮಹತ್ವದ ತೀರ್ಪು ನೀಡಿದೆ. ದೋಷಿಯು ಮೃತಪಟ್ಟ ಮಾತ್ರಕ್ಕೆ ನ್ಯಾಯಾಲಯವು ಆತನಿಗೆ ವಿಧಿಸಿದ್ದ ದಂಡ ಹಾಗೂ ಪರಿಹಾರವನ್ನು ಪಾವತಿಸುವ ಹೊಣೆಗಾರಿಕೆಯಿಂದ ಮುಕ್ತನಾಗುವುದಿಲ್ಲವೆಂದು ನ್ಯಾಯಾಲಯ ಪ್ರತಿಪಾದಿಸಿದೆ. ಮೃತನು ಬಿಟ್ಟುಹೋದ ಆಸ್ತಿಯ ಮೂಲಕ ಈ ಮೊತ್ತವನ್ನು ವಸೂಲು ಮಾಡಬಹುದಾಗಿದೆಯೆಂದು ನ್ಯಾಯಮೂರ್ತಿ ಶಾಲಿನಿ ಫನ್ಸಾಲ್ಕರ್ ಜೋಶಿ ತೀರ್ಪಿನಲ್ಲಿ ತಿಳಿಸಿದ್ದಾರೆ.
ಮೃತಪಟ್ಟ ದೋಷಿಯ ಕಾನೂನುಸಮ್ಮತ ವಾರಸುದಾರಳಾದ ಮಾತ್ರಕ್ಕೆ ನ್ಯಾಯಾಲಯ ಆತನಿಗೆ ವಿಧಿಸಿದ್ದ ದಂಡ ಹಾಗೂ ಪರಿಹಾರವನ್ನು ತಾನು ಪಾವತಿಸಬೇಕಾಗಿಲ್ಲವೆಂದು ವಾದಿಸಿ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಶ್ರೀವರ್ಧನ್‌ನ ನಿವಾಸಿ ಶಮೀನ್ ಸರ್ಖೋಟ್ ಎಂಬಾಕೆ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಈ ತೀರ್ಪು ನೀಡಿದೆ.
ಶಮೀನ್‌ಳ ಪತಿ ಸೈಫುದ್ದೀನ್ 2006ರಲ್ಲಿ ಉದ್ಯಮಿಯೊಬ್ಬನಿಗೆ ನೀಡಿದ ಚೆಕ್ ಅಮಾನ್ಯ ಗೊಂಡಿದ್ದಕ್ಕಾಗಿ, ನ್ಯಾಯಾಲಯ ಆತನಿಗೆ 25 ಸಾವಿರ ರೂ.ದಂಡವನ್ನು ರಾಜ್ಯ ಸರಕಾರಕ್ಕೂ ಹಾಗೂ 2.85 ಲಕ್ಷ ರೂ.ಗಳನ್ನು ಬಾಧಿತ ವ್ಯಕ್ತಿಗೂ ನೀಡುವಂತೆ ಆದೇಶಿಸಿತ್ತು. ಈ ಆದೇಶವನ್ನು ಸೈಫುದ್ದೀನ್ ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ. ಪ್ರಕರಣ ವಿಚಾರಣೆಯ ಹಂತದಲ್ಲಿರುವಾಗ ಆತ ನಿಧನ ಹೊಂದಿದ್ದ. ಆದಾಗ್ಯೂ, ಸಂತ್ರಸ್ತ ವ್ಯಕ್ತಿಯು ಪರಿಹಾರದ ಹಣದ ವಸೂಲಾತಿ ಕೋರಿ ವಿಚಾರಣಾ ನ್ಯಾಯಾಲಯದ ಮೊರೆ ಹೋಗಿದ್ದ. ಕಳೆದ ಡಿಸೆಂಬರ್‌ನಲ್ಲಿ ನ್ಯಾಯಾಲಯವು ಪರಿಹಾರವನ್ನು ಪಾವತಿಸುವಂತೆ ಸೈಫುದ್ದೀನ್‌ನ ಪತ್ನಿಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಶಮೀನ್ ಬಾಂಬೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.