×
Ad

ಬಳಕೆಯ ನಂತರ ಹೊದಿಕೆಗಳನ್ನು ಸ್ವಚ್ಛಗೊಳಿಸಲು ರೈಲ್ವೆಯ ನಿರ್ಧಾರ

Update: 2016-03-13 23:36 IST

ಹೊಸದಿಲ್ಲಿ,ಮಾ.13: ರೈಲುಗಳಲ್ಲಿ ಪ್ರಯಾಣಿಕರಿಗೆ ಇಲಾಖೆಯು ಒದಗಿಸುವ ಹೊದಿಕೆಗಳಲ್ಲಿ ಕೆಟ್ಟ ವಾಸನೆಯಿಂದಾಗಿ ಮೂಗು ಮುಚ್ಚಿಕೊಂಡು ಮಲಗುವ ಕಾಲವು ಶೀಘ್ರವೇ ಮರೆಯಾಗಬಹುದು. ಪ್ರತಿ ಬಾರಿಯ ಬಳಕೆಯ ನಂತರ ಅವುಗಳನ್ನು ಒಗೆದು ಸ್ವಚ್ಛಗೊಳಿಸಲು ರೈಲ್ವೆ ನಿರ್ಧರಿಸಿದೆ.

ರೈಲ್ವೆಯು ಸಿದ್ಧಪಡಿಸಿರುವ ಹೊಸ ಯೋಜನೆಯಂತೆ ಈಗಿರುವ ಹೊದಿಕೆಗಳ ಬದಲಿಗೆ ಮೃದು ವಸ್ತ್ರದಿಂದ ತಯಾರಾದ ಹಗುರ ಬ್ಲಾಂಕೆಟ್‌ಗಳನ್ನು ಪ್ರಯಾಣಿಕರಿಗೆ ಒದಗಿಸಲಾಗುವುದು. ಪ್ರತಿ ಬಾರಿ ಬಳಕೆಯ ನಂತರ ಇವುಗಳನ್ನು ಸ್ವಚ್ಛಗೊಳಿಸಲಾಗುವುದು. ಇಂತಹ ಪ್ರಕ್ರಿಯೆ ರೈಲ್ವೆಯಲ್ಲಿ ಮೊದಲ ಬಾರಿಗೆ ನಡೆಯಲಿದೆ. ಈಗ ಹೊದಿಕೆಗಳನ್ನು ಒಂದೋ ಎರಡೋ ತಿಂಗಳಿಗೊಮ್ಮೆ ಒಗೆದರೆ ಅದೇ ಪುಣ್ಯವೆಂಬಂತಿದೆ.
ಎನ್‌ಐಎಫ್‌ಟಿ ವಿನ್ಯಾಸಗೊಳಿಸಿರುವ ಬ್ಲಾಂಕೆಟ್‌ಗಳನ್ನು ನಾವು ಖರೀದಿಸುತ್ತಿದ್ದೇವೆ. ಇವುಗಳನ್ನು ಪ್ರತಿ ಬಳಕೆಯ ನಂತರ ಒಗೆಯಬಹುದಾಗಿದೆ ಮತ್ತು ಹೆಚ್ಚು ಬಾಳಿಕೆಯೂ ಬರಲಿವೆ ಎಂದು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.
 ಹೊದಿಕೆಗಳ ಬಗ್ಗೆ ಪ್ರಯಾಣಿಕರ ದೂರುಗಳಿದ್ದುದರಿಂದ ಈ ಸಮಸ್ಯೆಯನ್ನು ಬಗೆಹರಿಸಲು ನಾವು ಪ್ರಯತ್ನಿಸಿದ್ದೇವೆ. ಆರಂಭದಲ್ಲಿ ನೂತನ ಹೊದಿಕೆಗಳನ್ನು ಕೆಲವು ಪ್ರಮುಖ ರೈಲುಗಳಲ್ಲಿ ಪ್ರಯಾಣಿಕರಿಗೆ ಒದಗಿಸಲಾಗುವುದು. ಕ್ರಮೇಣ ಹೆಚ್ಚಿನ ರೈಲುಗಳಿಗೆ ವಿಸ್ತರಿಸಲಾಗುವುದು ಎಂದರು.
ಕೇವಲ ಹೊದಿಕೆ ಮಾತ್ರವಲ್ಲ ಇಡೀ ಬೆಡ್‌ರೋಲ್‌ನ್ನು ನೂತನ ವರ್ಣ ಸಂಯೋಜನೆಯೊಂದಿಗೆ ಎನ್‌ಐಎಫ್‌ಟಿ ವಿನ್ಯಾಸಗೊಳಿಸಿದೆ. ಬೆಡ್‌ಶೀಟ್‌ಗಳು ಮತ್ತು ತಲೆದಿಂಬುಗಳ ಹೊದಿಕೆಗಳು ಹೊಸ ರೂಪವನ್ನು ತಳೆಯಲಿವೆ. ಕಿಟಕಿಗಳ ಪರದೆಗಳು ಮತ್ತು ಬೆಡ್‌ಶೀಟ್‌ಗಳ ಬಣ್ಣಗಳಿಗೆ ಅನುಗುಣವಾಗಿ ಬೋಗಿಗಳ ಒಳಾಂಗಣಗಳನ್ನು ಸಜ್ಜುಗೊಳಿಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News