ಪ್ರವಾದಿ ಕುರಿತ ಹೇಳಿಕೆ : ಈಜಿಪ್ಟ್ ಕಾನೂನು ಸಚಿವ ವಜಾ
ಕೈರೋ, ಮಾ. 14 : ಪ್ರವಾದಿ ಕುರಿತ ಅವಹೇಳನಕಾರಿ ಮಾತುಗಳನ್ನಾಡಿದ ಈಜಿಪ್ಟ್ ಕಾನೂನು ಸಚಿವ ಅಹ್ಮದ್ ಅಲ್ ಝಿಂದ್ ರನ್ನು ಅಲ್ಲಿನ ಪ್ರಧಾನಿ ಸಂಪುಟದಿಂದ ವಜಾ ಮಾಡಿದ್ದಾರೆ.
ಕಳೆದ ಶುಕ್ರವಾರ ಒಂದು ಖಾಸಗಿ ಟಿವಿ ವಾಹಿನಿಯ ಕಾರ್ಯಕ್ರಮದಲ್ಲಿ ಭಾಗವಹಿಸಿ ತನ್ನ ವಿರೋಧಿಗಳ ಕುರಿತು ಮಾತನಾಡುತ್ತಿದ್ದರು. ಆಗ ಪತ್ರಕರ್ತರನ್ನು ಬಂಧಿಸುತ್ತೀರಾ ಎಂದು ಅವರನ್ನು ಕೇಳಲಾಯಿತು. ಅದಕ್ಕೆ ತಕ್ಷಣ "ಅದು ಪ್ರವಾದಿಯಾಗಿದ್ದರೂ ಸರಿ " ಎಂದು ಹೇಳಿ ಬಳಿಕ ತಕ್ಷಣ ವಿಷಾದ ವ್ಯಕ್ತಪಡಿಸಿದರು. ಮತ್ತೆ ಮಾತನಾಡಿದ ಅವರು " ತಪ್ಪು ಮಾಡಿದವರು ಯಾವುದೇ ಸ್ಥಾನದಲ್ಲಿದ್ದರೂ ಅವರನ್ನು ಜೈಲಿಗೆ ಕಳಿಸಲಾಗುವುದು " ಎಂದು ಹೇಳಿದರು.
" ಪ್ರಧಾನ ಮಂತ್ರಿ ಶರೀಫ್ ಇಸ್ಮಾಯೀಲ್ ಅವರು ಅಹ್ಮದ್ ಅಲ ಝಿಂದ್ ಅವರನ್ನು ಹುದ್ದೆಯಿಂದ ಬಿಡುಗಡೆಗೊಳಿಸುವಂತೆ ಆದೇಶ ನೀಡಿದ್ದಾರೆ " ಎಂದು ಸರಕಾರ ಪತ್ರಿಕಾ ಪ್ರಕಟಣೆ ನೀಡಿದೆ. ಈ ಬಗ್ಗೆ ಅದು ಬೇರೆ ಯಾವುದೇ ವಿವರ ನೀಡಿಲ್ಲ.
ಈಜಿಪ್ಟ್ ನ್ಯಾಯಾಧೀಶರು ಈ ಕ್ರಮವನ್ನು ವಿರೋಧಿಸಿದ್ದಾರೆ. ಅಲ್ಲಿನ ನ್ಯಾಯಾಧೀಶರ ಕ್ಲಬ್ ಅಧ್ಯಕ್ಷ " ಅದು ಬಾಯ್ತಪ್ಪಿನಿಂದ ಬಂದಿದ್ದು, ಯಾರಿಗೂ ಹಾಗೆ ಆಗುವ ಸಾಧ್ಯತೆ ಇದೆ " ಎಂದು ರಾಯ್ಟರ್ಸ್ ಗೆ ತಿಳಿಸಿದ್ದಾರೆ.
ಅಹ್ಮದ್ ರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿ ಭಾರೀ ಚರ್ಚೆ ಹಾಗೂ ಆಕ್ರೋಶಕ್ಕೆ ಕಾರಣವಾಗಿತ್ತು.