ಸ್ಥಗಿತಗೊಂಡಿರುವ ಕಿಂಗ್‌ಫಿಷರ್ ಏರ್‌ಲೈನ್ಸ್‌ಗೆ ಕಾರ್ಮಿಕ ಸಚಿವಾಲಯದಿಂದ ‘ಕ್ಲೀನ್ ಚಿಟ್’
ಹೊಸದಿಲ್ಲಿ, ಮಾ.15: ಹಾರಾಟವನ್ನು ಎಂದೋ ನಿಲ್ಲಿಸಿರುವ ಮದ್ಯದ ದೊರೆ ವಿಜಯ ಮಲ್ಯರ ಕಿಂಗ್‌ಫಿಷರ್ ಏರ್‌ಲೈನ್ಸ್ ವಿರುದ್ಧ ಯಾವುದೇ ದೂರುಗಳು ಇಲ್ಲದಿರುವ ಹಿನ್ನೆಲೆಯಲ್ಲಿ ಕೇಂದ್ರ ಕಾರ್ಮಿಕ ಸಚಿವಾಲಯವು ಅದಕ್ಕೆ ಕ್ಲೀನ್ ಚಿಟ್ ನೀಡಿದೆ. ಆದರೆ ವಂತಿಗೆಗಳ ಪಾವತಿ 2015, ಸೆಪ್ಟಂಬರ್ ನಂತರ ಸ್ಥಗಿತಗೊಂಡಿರುವುದರಿಂದ ತನ್ನ ಎಲ್ಲ ನೌಕರರಿಗೆ ಸಂಬಂಧಿಸಿದಂತೆ ಅದು ಕಾರ್ಮಿಕ ನಿಯಮಗಳನ್ನು ಪಾಲಿಸಿದೆಯೇ ಎನ್ನುವುದನ್ನು ಖಚಿತ ಪಡಿಸಿಕೊಳ್ಳಲು ಜಾರಿ ಅಧಿಕಾರಿಗಳ ದಳವೊಂದನ್ನು ಸಚಿವಾಲಯವು ರಚಿಸಿದೆ.
ಕಂಪೆನಿಯಿಂದ ಇಪಿಎಫ್ ವಂತಿಗೆ ಬಾಕಿಯಿರುವ ಬಗ್ಗೆ ನೌಕರರಿಂದ ಅಥವಾ ಕಾರ್ಮಿಕ ಒಕ್ಕೂಟಗಳಿಂದ ಯಾವುದೇ ದೂರು ದಾಖಲೆಯಲ್ಲಿ ಲಭ್ಯವಿಲ್ಲ ಎಂದು ಸಚಿವಾಲಯವು ಮಂಗಳವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ. ಅಧಿಕಾರಿಗಳಿಂದ ದಂಡನಾ ಕ್ರಮಗಳ ಭೀತಿಯಿಂದಾಗಿ ಕಂಪೆನಿಯು ಪಿಎಫ್ ವಂತಿಗೆಯನ್ನು ಪಾವತಿಸುತ್ತಿತ್ತು, ಆದರೆ ಅದು ವೇತನಗಳನ್ನು ಬಾಕಿಯಿರಿಸಿದೆ ಎಂದು ಏರಲೈನ್ಸ್‌ನ ಮಹಿಳಾ ಉದ್ಯೋಗಿಗಳು ಇತ್ತೀಚಿಗೆ ಬಹಿರಂಗ ಪತ್ರವೊಂದರಲ್ಲಿ ಆರೋಪಿಸಿದ್ದರು. 2012,ಡಿಸೆಂಬರ್‌ವರೆಗೆ ವೇತನಗಳ ಮೇಲೆ ಸಲ್ಲಿಸಬೇಕಾಗಿದ್ದ ಪಿಎಫ್ ವಂತಿಗೆ ಮತ್ತು ಇತರ ಬಾಕಿಗಳನ್ನು ಕಂಪೆನಿಯು ಪಾವತಿಸಿದೆ ಎಂದು ಸಚಿವಾಲಯವು ತಿಳಿಸಿದೆ.
2012,ಅಕ್ಟೋಬರ್‌ನಲ್ಲಿ ನಾಗರಿಕ ವಾಯುಯಾನ ಮಹಾ ನಿರ್ದೇಶಕರು ಕಿಂಗ್‌ಫಿಷರ್ ಏರ್‌ಲೈನ್ಸ್‌ನ ಪರವಾನಿಗೆಯನ್ನು ಅಮಾನತುಗೊಳಿಸಿದ್ದರು. ನಂತರ 2012ರಲ್ಲಿ ಪರವಾನಿಗೆಯು ರದ್ದುಗೊಂಡ ನಂತರ ಕಂಪೆನಿಯು ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತ್ತು.