ಕುದುರೆಯ ಕಾಲು ಮುರಿದ ಶಾಸಕ
ಡೆಹ್ರಾಡೂನ್, ಮಾ.15: ಇಲ್ಲಿನ ಉತ್ತರಾಖಂಡ ವಿಧಾನಸಭೆಯ ಬಳಿಕ ಮುಖ್ಯಮಂತ್ರಿ ಹರೀಶ್ ರಾವತ್ ವಿರುದ್ಧ ಸೋಮವಾರ ಪ್ರತಿಭಟನೆ ನಡೆಸುತ್ತಿದ್ದ ವೇಳೆ, ಪೊಲೀಸ್ ಕುದುರೆಯೊಂದನ್ನು ನಿಷ್ಕರುಣೆಯಿಂದ ಹೊಡೆದು ಅದರ ಹಿಂಗಾಲೊಂದನ್ನು ಮುರಿದ ಆರೋಪದಲ್ಲಿ ರಾಜ್ಯದ ಬಿಜೆಪಿ ಶಾಸಕರೊಬ್ಬರು ಭಾರೀ ಖಂಡನೆಗೆ ಗುರಿಯಾಗಿದ್ದಾರೆ. ಉತ್ತರಾಖಂಡ ಪೊಲೀಸ್‌ನ ಅಶ್ವಾರೋಹಿ ಪಡೆಗೆ ಸೇರಿದ್ದ ಈ ಕುದುರೆ ಮನ್ಸೂರಿಯ ಬಿಜೆಪಿ ಶಾಸಕ ಗಣೇಶ್ ಜೋಶಿಯವರ ಕ್ರೌರ್ಯದಿಂದ ಊನಗೊಂಡಿದ್ದು, ಅದನ್ನು ಬಹುಶಃ ಪೊಲೀಸ್ ದಳದಿಂದ ಹೊರಗಿಡಬೇಕಾಗಬಹುದು. ಪ್ರತಿಭಟನೆಯನ್ನು ನಿಯಂತ್ರಿಸಲು ನಿಯೋಜಿಸಲಾಗಿದ್ದ ಈ ಪೊಲೀಸ್ ಕುದುರೆಯ ಮೇಲೆ ಜೋಶಿ ದೊಣ್ಣೆಯೊಂದರಿಂದ ದಾಳಿ ನಡೆಸಿದ್ದಾರೆ.
ಜೋಶಿ, ಕುದುರೆಗೆ ಥಳಿಸುತ್ತಿದ್ದಾಗ ಇತರ ಪ್ರತಿಭಟನಾಕಾರರು ಸೇರಿಕೊಂಡರು. ಕುದುರೆಯ ಕಾಲನ್ನು ಕತ್ತರಿಸಬೇಕಷ್ಟೇ ಎಂದು ವೈದ್ಯರು ಹೇಳಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ. ಬಿಜೆಪಿ ಶಾಸಕನ ವಿರುದ್ಧ ಪ್ರಕರಣವೊಂದನ್ನು ದಾಖಲಿಸಲಾಗುವುದು.
ಆದರೆ ತನ್ನ ಕೃತ್ಯವನ್ನು ಸಮರ್ಥಿಸಿಕೊಂಡಿರುವ ಜೋಶಿ, ಕುದುರೆಗೆ ನೀರು ಕುಡಿಸಲಾಗಿದೆ. ಅದು ಸಂಪೂರ್ಣ ಆರೋಗ್ಯವಾಗಿದೆ. ಕುದುರೆಯನ್ನು ಬಿಸಿಲಿನಲ್ಲಿ ನಿಲ್ಲಿಸಿದುದರಿಂದ ಬಹುಶಃ ಅದಕ್ಕೆ ಅನಾರೋಗ್ಯವಾದಂತೆ ಅನಿಸಿರಬೇಕು ಹಾಗೂ ಅದಕ್ಕೆ ಬಾಯಾರಿಕೆಯಾಗಿರಬೇಕು ಹೊರತು ಬೇರೇನೂ ಆಗಿಲ್ಲ. ನೀರು ಕುಡಿಸಿದ ವೇಳೆ ಕುದುರೆ ಚೆನ್ನಾಗಿಯೇ ಇತ್ತೆಂದು ಪ್ರತಿಪಾದಿಸಿದ್ದಾರೆ.
ಆದರೆ, ಶಾಸಕನ ವಿರುದ್ಧ ಕಠಿಣಕ್ರಮ ಕೈಗೊಳ್ಳುವಂತೆ ‘ಪೆಟಾ’ ಒತ್ತಾಯಿಸಿದೆ. ಕುದುರೆ ಭಾರೀ ನೋವಿನಿಂದ ನರಳುತ್ತಿದೆ. ಅದು ಇನ್ನೆಂದೂ ನಡೆಯಲಾರದು ಹಾಗೂ ಅದರ ಕಾಲನ್ನು ಕತ್ತರಿಸಬೇಕಾಗುತ್ತದೆಯೆಂದು ವೈದ್ಯರು ಹೇಳಿದ್ದಾರೆ. ಇಂತಹ ಕ್ರೌರ್ಯವನ್ನು ಕುದುರೆಯ ಮೇಲೆ ಪ್ರದರ್ಶಿಸಿದವರು ಬೇರಾರ ಮೇಲೂ ಪ್ರದರ್ಶಿಸಬಲ್ಲರು. ಅವರು ಹುದ್ದೆಯಲ್ಲಿ ಇರಲು ಅರ್ಹರಲ್ಲವೆಂದು ಪೆಟಾ ಅಭಿಯಾನ ಪ್ರಬಂಧಕಿ ಭುವನೇಶ್ವರಿ ಗುಪ್ತಾ ಹೇಳಿದ್ದಾರೆ. ಭ್ರಷ್ಟಾಚಾರ, ಕಾನೂನು-ಸುವ್ಯವಸ್ಥೆ ಕುಸಿತದ ವಿರುದ್ಧ ಬಿಜೆಪಿ ನಡೆಸಿದ ಮೆರವಣಿಗೆಯೊಂದರ ವೇಳೆ ಈ ಘಟನೆ ನಡೆದಿವೆ. ಜೋಶಿ ಕುದುರೆಯನ್ನು ಮುಂದಿನಿಂದ ಹೊಡೆಯುತ್ತಿರುವುದು ಹಾಗೂ ಅದರ ಹಿಂಗಾಲು ಮುರಿದಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ.
ಕುದುರೆಯು ಜೋಶಿಯವರ ಕ್ರೂರತನದ ಬಲಿಪಶುವಾಗಿದೆಯೆಂದು ಮುಖ್ಯಮಂತ್ರಿಯ ಮಾಧ್ಯಮ ಪ್ರಭಾರಿ ಸುರೇಂದ್ರ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಆದರೆ, ಕುದುರೆಯ ಕಾಲು ಬಿರುಕೊಂದರಲ್ಲಿ ಸಿಲುಕಿ ನೋವಾಗಿದೆಯೆನ್ನುವ ಮೂಲಕ ಬಿಜೆಪಿ ವಕ್ತಾರ ಮುನ್ನಾ ಸಿಂಗ್ ಚೌಹಾಣ್ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ.