ರೋಹ್ಟಕ್: ಕಬಡ್ಡಿ ಆಟಗಾರನ ಕೊಲೆ ಕ್ಯಾಮರಾದಲ್ಲಿ ದಾಖಲು
ಹೊಸದಿಲ್ಲಿ, ಮಾ.16: ರೋಹಕ್ಟ್‌ನಲ್ಲಿ ರಾಷ್ಟ್ರಮಟ್ಟದ ಕಬಡ್ಡಿ ಆಟಗಾರನೊಬ್ಬನನ್ನು ಹಾಡಹಗಲೇ ಹತ್ಯೆ ಮಾಡಿದ ದೃಶ್ಯವು ಘಟನಾ ಸ್ಥಳದ ಸಮೀಪದ ಮನೆಯೊಂದರ ಭದ್ರತಾ ಕ್ಯಾಮರಾದಲ್ಲಿ ಸೆರೆಯಾಗಿದೆ.
ಸುಖ್ವಿಂದರ್ ನರ್ವಾಲ್ ಎಂಬ ಈ ಕ್ರೀಡಾಪಟು, ತರಬೇತಿ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ, ಹರ್ಯಾಣದ ಆತನ ಗ್ರಾಮದಲ್ಲಿ ಇಬ್ಬರು ಸ್ಕೂಟರ್ ಸವಾರರು ನಿನ್ನೆ ಆತನನ್ನು ಗುಂಡಿಕ್ಕಿ ಕೊಂದಿದ್ದರು.
ನರ್ವಾಲ್ ತನ್ನ ಸೆಲ್‌ಫೋನ್‌ನಲ್ಲಿ ಮಾತನಾಡುತ್ತ ನಡೆಯುತ್ತಿದ್ದ ವೇಳೆ ಸ್ಕೂಟರ್ ಆತನನ್ನು ಸಮೀಪಿಸಿತ್ತು. ಒಂದು ಗುಂಡು ತಗಲಿದೊಡನೆಯೇ ಅವರು ನೆಲಕ್ಕೆ ಬಿದ್ದಿದ್ದರು. ಕಪ್ಪು ಪ್ಯಾಂಟ್ ಧರಿಸಿದ್ದ ಹಂತಕರು ಸ್ಕೂಟರ್‌ನಿಂದ ಇಳಿದು ನರ್ವಾಲ್‌ರ ತಲೆಗೆ ಮತ್ತೆ ಮತ್ತೆ ಗುಂಡು ಹಾರಿಸಿದ್ದರು. ಒಂದು ಹಂತದಲ್ಲಿ ನೆಲದಲ್ಲಿ ಬಿದ್ದಿದ್ದ ಕಬಡ್ಡಿ ಪಟು ಗುಂಡು ದಾಳಿ ನಡೆದಾಗ ಹೊರಳಿ ಏಳುಲು ಯತ್ನಿಸಿದ್ದರಾದರೂ, ಬಳಿಕ ನಿಧಾನವಾಗಿ ರಸ್ತೆಗೆ ಉರುಳಿದ್ದರು. ಈ ದೃಶ್ಯಾವಳಿ ಭದ್ರತಾ ಕ್ಯಾಮರಾದಲ್ಲಿ ದಾಖಲಾಗಿದೆ.
ಕೊಲೆಗಾರರ ಗುರುತನ್ನು ಪೊಲೀಸರು ಇನ್ನಷ್ಟೇ ಪತ್ತೆ ಹಚ್ಚಬೇಕಾಗಿದೆ. ಕೇವಲ ಮೂರು ತಿಂಗಳ ಹಿಂದೆ, ದೀಪಕ್ ಕುಮಾರ್ ಎಂಬ ಇನ್ನೊಬ್ಬ ಕಬಡ್ಡಿ ಆಟಗಾರನನ್ನು ಮೋಟರ್ ಸೈಕಲ್ ಸವಾರ ಹಂತಕರು, ರೋಹ್ಟಕ್‌ನ ನಿರ್ಜನ ಉದ್ಯಾನವನವೊಂದರ ಬಳಿ ಕೊಲೆ ಮಾಡಿದ್ದರು. ಅವರ ಸೋದರ ಸಹಾಯಕ್ಕೆ ಬರುವ ಮುನ್ನ, ದೀಪಕ್ ಅರ್ಧ ತಾಸಿನ ಕಾಲ ರಸ್ತೆಯ ಬದಿಯಲ್ಲೇ ಬಿದ್ದಿದ್ದರು.