×
Ad

ಕಾಕ್ರಾಪಾರ್ ಅಣು ವಿದ್ಯುತ್ ಕೇಂದ್ರದಲ್ಲಿಯ ಸೋರಿಕೆ ತಕ್ಷಣವೇ ಪತ್ತೆಯಾಗಿತ್ತು: ಸರಕಾರ

Update: 2016-03-16 23:40 IST

ಹೊಸದಿಲ್ಲಿ,ಮಾ.16: ನಾಲ್ಕು ದಿನಗಳ ಹಿಂದೆ ಗುಜರಾತಿನ ಕಾಕ್ರಾಪಾರ್ ಅಣು ವಿದ್ಯುತ್ ಕೇಂದ್ರದ ಉತ್ಪಾದನಾ ಘಟಕವೊಂದರಲ್ಲಿ ಶೀತಲೀಕರಣ ಕೊಳವೆಯ ಸೋರಿಕೆಯ ಘಟನೆಯನ್ನು ಕೆಲವೇ ನಿಮಿಷಗಳಲ್ಲಿ ಪತ್ತೆ ಹಚ್ಚಲಾಗಿತ್ತು ಎಂದು ಪ್ರಧಾನಿ ಕಚೇರಿಯಲ್ಲಿ ಸಹಾಯಕ ಸಚಿವ ಜಿತೇಂದ್ರ ಸಿಂಗ್ ಅವರು ಬುಧವಾರ ಲೋಕಸಭೆಯಲ್ಲಿ ತಿಳಿಸಿದರು.

ಪ್ರಶ್ನೆವೇಳೆಯಲ್ಲಿ ಪೂರಕ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ಅವರು, ಅದೊಂದು ‘ಘಟನೆ ’ ಹೊರತು ‘ಅವಘಡ ’ಆಗಿರಲಿಲ್ಲ ಎಂದು ಹೇಳಿದರು.
ಶೀತಲೀಕರಣ ಕೊಳವೆಯಲ್ಲಿ ಸೋರಿಕೆಯುಂಟಾದಾಗ ಉಷ್ಣತೆಯನ್ನು ತಗ್ಗಿಸಲು ಪರ್ಯಾಯ ವ್ಯವಸ್ಥೆಗಳನ್ನು ಬಳಸಿಕೊಳ್ಳಲಾಗಿತ್ತು ಎಂದರು.
ಅಂತಾರಾಷ್ಟ್ರೀಯ ಅಣು ಸಮುದಾಯವು ನಿಗದಿಗೊಳಿಸಿರುವ ಮಾನದಂಡದಂತೆ ಈ ಘಟನೆಯು ಕನಿಷ್ಠ ಸ್ತರದ್ದಾಗಿತ್ತು ಎಂದ ಅವರು, ಇಂತಹ ಘಟನೆಗಳು ಅತ್ಯುತ್ತಮವೆಂದು ಪರಿಗಣಿಸಲಾಗಿರುವ ಕೆನಡಾದ ರಿಯಾಕ್ಟರ್‌ಗಳಲ್ಲಿಯೂ ಸಂಭವಿಸಿವೆ ಎಂದು ಹೇಳಿದರು.
 ಪರಮಾಣು ಹೊಣೆಗಾರಿಕೆ ಕಾನೂನನ್ನು ಪ್ರಸ್ತಾಪಿಸಿದ ಅವರು,ಅವಘಡಗಳ ಸಂದರ್ಭದಲ್ಲಿ ಸಂತ್ರಸ್ತರ ಹಿತಾಸಕ್ತಿಯು ಪರಮೋಚ್ಚವಾಗಿರುತ್ತದೆ ಎಂದು ಭಾರತವು ಭರವಸೆ ನೀಡಿದೆ. ಊಹಾಪೋಹಗಳಿಗೆ ವ್ಯತಿರಿಕ್ತವಾಗಿ ಪರಮಾಣು ಅಪಘಾತ ಪ್ರಕರಣಗಳಲ್ಲಿ ಹೊಣೆಗಾರಿಕೆ ಪೂರೈಕೆದಾರನ ಮೇಲೆಯೇ ಇರುತ್ತದೆ ಎಂದರು.
ಪ್ರಸಕ್ತ ದೇಶದಲ್ಲಿ ಉತ್ಪಾದನೆಯಾಗುತ್ತಿರುವ ಒಟ್ಟು ವಿದ್ಯುತ್ತಿನಲ್ಲಿ ಪರಮಾಣು ವಿದ್ಯುತ್ ಶೇ.3.3ರಷ್ಟು ಪಾಲನ್ನು ಹೊಂದಿದೆ ಮತ್ತು ಭವಿಷ್ಯದಲ್ಲಿ ಇನ್ನಷ್ಟು ವಿದ್ಯುತ್ ರಿಯಾಕ್ಟರ್‌ಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಸಿಂಗ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News