ಹೋಳಿಯ ವೇಳೆ ನೀರು ವ್ಯರ್ಥಮಾಡದಿರಿ:
ಮುಂಬೈ, ಮಾ.16: ಹೋಳಿ ಹಬ್ಬದ ಸಂದರ್ಭದಲ್ಲಿ ನೀರನ್ನು ವ್ಯರ್ಥಗೊಳಿಸದಂತೆ ಮಹಾರಾಷ್ಟ್ರ ಸರಕಾರವು ಜನರನ್ನು ಒತ್ತಾಯಿಸಿದೆ. ಹೋಳಿಯ ವೇಳೆ ನೀರಿನ ಅಪವ್ಯಯ ಮಾಡಬಾರದು ಹಾಗೂ ಯಾವುದೇ ಮಳೆ ನೃತ್ಯವನ್ನು ನಡೆಸಬಾರದೆಂದು ರಾಜ್ಯದ ಜಲ ಸಂಪನ್ಮೂಲ ಸಚಿವಾಲಯ ಕಡ್ಡಾಯ ಆದೇಶವನ್ನು ಜಾರಿ ಮಾಡಿದೆ.
ಹೋಳಿಯ ವೇಳೆ ಈಜು ಕೊಳಗಳಿಗೆ ನೀರನ್ನು ಪೂರೈಸದಂತೆಯೂ ಸಚಿವಾಲಯ ಎಲ್ಲ ನಗರಾಡಳಿತಗಳಿಗೆ ಪತ್ರ ಬರೆದಿದೆ.
ಹಬ್ಬದ ವೇಳೆ ನೀರನ್ನು ವ್ಯರ್ಥಗೊಳಿಸುವುದು ಹಾಗೂ ಮಳೆ ನೃತ್ಯಗಳನ್ನು ನಡೆಸದಂತೆ ಜಿಲ್ಲೆಯ ಜನರಿಗೆ ಠಾಣೆಯ ಕಲೆಕ್ಟರ್ ಅಶ್ವಿನಿ ಜೋಶಿ ಕರೆ ನೀಡಿದ್ದಾರೆ.
ಜನರು ಸಮಸ್ಯೆಯನ್ನು ಅರ್ಥ ಮಾಡಿಕೊಂಡು ನೀರಿನ ದುಂದನ್ನು ತಡೆಯಬೇಕು ಎಂದಿರುವ ಜೋಶಿ, ಮಳೆ ಕೊಯ್ಲು, ಮರು ಶುದ್ಧೀಕ ರಣ ನಡೆಸುವಂತೆ ಹಾಗೂ ಅಂತಹ ಯೋಜನೆಗಳನ್ನು ಜಿಲ್ಲಾ ಯೋಜನಾ ಆಯೋಗದ ಮುಂದಿರಿಸುವಂತೆ ಮನವಿ ಮಾಡಿದ್ದಾರೆ.
ಜಿಲ್ಲೆಯ ಸಹಾಪುರ ತಾಲೂಕಿನಲ್ಲಿ ಅನೇಕ ನದಿಗಳು ಹಾಗೂ ಅಣೆಕಟ್ಟುಗಳಿದ್ದರೂ, ಅಲ್ಲಿ ಭಾರೀ ನೀರಿನ ಅಭಾವವಿದೆಯೆಂಬುದನ್ನು ಅವರು ಬೆಟ್ಟು ಮಾಡಿದ್ದಾರೆ.