ಅಲ್ಲಾಹನ ಹೆಸರುಗಳಲ್ಲಿ ಹಿಂಸೆಯಿಲ್ಲ : ಪ್ರಧಾನಿ ಮೋದಿ
ಹೊಸದಿಲ್ಲಿ , ಮಾ. 17 : ಇಸ್ಲಾಂ ಧರ್ಮದ ಶ್ರೀಮಂತ ವೈವಿಧ್ಯತೆಯನ್ನು ಕೊಂಡಾಡಿದ ಪ್ರಧಾನಿ ನರೇಂದ್ರ ಮೋದಿ " ಎಲ್ಲ ಧರ್ಮಗಳು ಭಾರತದ ಅವಿಭಾಜ್ಯ ಅಂಗಗಳಾಗಿವೆ " ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ವಿಶ್ವ ಸೂಫಿ ಫೋರಂ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮೋದಿ, " ನಮ್ಮ ಎಲ್ಲ ಜನರು, ಹಿಂದೂಗಳು, ಮುಸ್ಲಿಮರು, ಸಿಕ್ಖರು, ಕ್ರೈಸ್ತರು , ಬೌದ್ಧರು , ಪಾರ್ಸಿಗಳು, ಆಸ್ತಿಕರು, ನಾಸ್ತಿಕರು ಎಲ್ಲರೂ ದೇಶದ ಅವಿಭಾಜ್ಯ ಅಂಗವಾಗಿದ್ದಾರೆ. ಕುರ್ ಆನ್ ಹೇಳಿದ್ದನ್ನು ನಾವು ಸ್ಮರಿಸೋಣ. ' ಒಂದು ವ್ಯಕ್ತಿಯನ್ನು ಕೊಂದರೆ , ಇಡೀ ಮನುಕುಲವನ್ನೇ ಕೊಂದಂತೆ ' ಎಂದು ಮೋದಿ ನೆನಪಿಸಿದರು.
ಇದು ಅತ್ಯಂತ ನಿರ್ಣಾಯಕ ಸಂದರ್ಭದಲ್ಲಿ ನಡೆಯುತ್ತಿರುವ ಅತ್ಯಂತ ವಿಶೇಷ ಕಾರ್ಯಕ್ರಮ ಎಂದು ಹೇಳಿದ ಮೋದಿ ಅವರು " ಅಲ್ಲಾಹನ 99 ಹೆಸರುಗಳಲ್ಲಿ ಒಂದೇ ಒಂದು ಹೆಸರು ಹಿಂಸೆಯನ್ನು ಪ್ರತಿನಿಧಿಸುವುದಿಲ್ಲ. " ಎಂದು ಹೇಳಿದರು. ಇಸ್ಲಾಂ ಎಂದರೆ ಅರ್ಥವೇ ಶಾಂತಿ. ಸೂಫಿಸಂ ಜಗತ್ತಿಗೆ ಸಿಕ್ಕಿದ ಅತಿ ದೊಡ್ಡ ಕೊಡುಗೆ ಎಂದು ಹೇಳಿದರು.