ಜಡ್ಜ್-ವಕೀಲರ ನಡುವೆ ವಾಗ್ಯುದ್ಧ
ಹೊಸದಿಲ್ಲಿ, ಮಾ.17: ಜೆಎನ್‌ಯು ವಿವಾದದಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್‌ಗೆ ಶರತ್ತುಬದ್ಧ ಜಾಮೀನು ನೀಡುವಾಗ ನ್ಯಾಯಮೂರ್ತಿ ಪ್ರತಿಭಾ ರಾಣಿ ವ್ಯಕ್ತಪಡಿಸಿರುವ ಅಭಿಪ್ರಾಯ ಇದೀಗ ಬಿಸಿ ಚರ್ಚೆಗೆ ಕಾರಣವಾಗಿದೆ, ಈ ಸಂಬಂಧ ವಕೀಲರು ಹಾಗೂ ನ್ಯಾಯಾಧೀಶೆ ನಡುವೆ ನಡೆದ ಮಾತಿನ ಚಕಮಕಿಯಿಂದಾಗಿ ಕನ್ಹಯ್ಯಾ ಜಾಮೀನು ವಜಾಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ ಬೇರೆ ಪೀಠಕ್ಕೆ ವರ್ಗಾಯಿಸಲಾಯಿತು.
ಮುಖ್ಯ ನ್ಯಾಯಮೂರ್ತಿಯವರು ಈ ಅರ್ಜಿಯನ್ನು ಬೇರೆ ಪೀಠಕ್ಕೆ ವರ್ಗಾಯಿಸಿದರು. ಪ್ರತಿಭಾ ರಾಣಿಯವರ ಅಭಿಪ್ರಾಯಗಳಿಗೆ ವಕೀಲ ಆರ್.ಪಿ.ಲೂಥ್ರಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕನ್ಹಯ್ಯಾ ಅವರಿಗೆ ಮಂಜೂರು ಮಾಡಿರುವ ಜಾಮೀನು ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರೆ, ಮಂಜೂರು ಮಾಡಿರುವ ಜಾಮೀನನ್ನೂ ರದ್ದುಗೊಳಿಸಬೇಕಾಗುತ್ತದೆ ಎಂದು ನ್ಯಾಯಾಧೀಶರು ಎಚ್ಚರಿಕೆ ನೀಡಿದ್ದು ವಾಗ್ವಾದಕ್ಕೆ ಕಾರಣವಾಯಿತು.
ಅರ್ಜಿಯನ್ನು ವಿಚಾರಣೆಗೆ ಪಡೆಯುವ ಮುನ್ನ ನ್ಯಾಯಾಧೀಶೆ, ಅರ್ಜಿದಾರರ ಇರುವಿಕೆಯ ಬಗ್ಗೆ ಮಾಹಿತಿ ಪಡೆದುಕೊಂಡು ಈ ಅರ್ಜಿ ತಿರಸ್ಕೃತವಾದರೆ ಅದರ ವೆಚ್ಚ ಭರಿಸುವ ಮತ್ತು ಇತರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಆಗ ಲೂಥ್ರಾ, ಈ ರೀತಿ ಎಚ್ಚರಿಕೆ ನೀಡುವಂತಿಲ್ಲ ಎಂದು ಪ್ರತಿಭಟನೆ ನಡೆಸಿದರು. ನ್ಯಾಯಾಲಯ ಅರ್ಜಿದಾರರಿಗೆ ಬೆದರಿಕೆ ಹಾಕುವಂತಿಲ್ಲ ಎಂದು ಹೇಳಿದರು. ಈ ವಿವಾದದ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿಗಳು ಅರ್ಜಿಯನ್ನು ಬೇರೆ ಪೀಠಕ್ಕೆ ವರ್ಗಾಯಿಸಿದರು.