×
Ad

ಸಿಂಧಿಯಾಗೆ ಪಾರಿಕ್ಕರ್ ವ್ಯಂಗ್ಯ ಪ್ರಶ್ನೆ

Update: 2016-03-17 23:06 IST

ಹೊಸದಿಲ್ಲಿ, ಮಾ.17: ಪಠಾಣ್‌ಕೋಟ್ ದಾಳಿಯ ಸಂಬಂಧ ಲೋಕಸಭೆಯಲ್ಲಿ ಇಂದು ನಡೆದ ಚರ್ಚೆಯ ವೇಳೆ ಕಾಂಗ್ರೆಸ್ ಸಂಸದ ಜ್ಯೋತಿರಾದಿತ್ಯ ಸಿಂಧಿಯಾರ ಹೇಳಿಕೆಯೊಂದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್, ಸಿಂಧೀಯಾರವರು ಜನವರಿಯಲ್ಲಿ ಪಠಾಣ್‌ಕೋಟ್ ವಾಯು ನೆಲೆಗೆ ದಾಳಿ ನಡೆಸಿದ್ದ ಉಗ್ರರೊಂದಿಗೆ ಸಂಪರ್ಕದಲ್ಲಿದ್ದರೇ ಎಂದು ಪ್ರಶ್ನಿಸಿದರು.

ಇದಕ್ಕೂ ಮುಂಚೆ ಕಾಂಗ್ರೆಸ್ ಪಕ್ಷ ಪಠಾಣ್‌ಕೋಟ್ ದಾಳಿಯ ಸಂದರ್ಭದ ಕಾರ್ಯಾಚರಣೆ ಸಮಾಧಾನಕಾರಿಯಾಗಿರಲಿಲ್ಲವೆಂದು ಹೇಳುತ್ತಾ ಭಾರತೀಯ ಸೇನೆಯೇಕೆ ಕಂಟೋನ್ಮೆಂಟನ್ನು ತನ್ನ ಜವಾನರು ಸುತ್ತುವರಿಯುವಂತೆ ಮಾಡಿಲ್ಲ ಎಂದು ಪ್ರಶ್ನಿಸಿತ್ತು. ಉಗ್ರರು ಕಂಟೋನ್ಮೆಂಟ್‌ನಲ್ಲಿ ಜನವರಿ 2ರಂದು ಬೆಳಿಗ್ಗೆ 3:11ಕ್ಕೇ ಇದ್ದರು ಎಂದು ಸಚಿವರು ಹೇಳಿದಾಗ ಸಿಂಧಿಯಾ ಅದನ್ನು ಪ್ರಶ್ನಿಸಿದ್ದರು.
ಆಗ ಪಾರಿಕ್ಕರ್ ‘‘ಅವರು ಒಳಗಿರಲಿಲ್ಲವೆಂದು ನಿಮಗೆ ಹೇಗೆ ಗೊತ್ತು? ನೀವು ಉಗ್ರರೊಂದಿಗೆ ಸಂಪರ್ಕದಲ್ಲಿದ್ದಿರೇನು?’’ ಎಂದು ಮರುಪ್ರಶ್ನಿಸಿದ್ದರು.
ಪಕ್ಷಾಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ಸಂಸತ್ತಿನಲ್ಲಿದ್ದ ಹೊರತಾಗಿಯೂ ಕಾಂಗ್ರೆಸ್ ಸಚಿವರ ಹೇಳಿಕೆಯನ್ನು ಕೇವಲ ವಿರೋಧಿಸಿತ್ತಲ್ಲದೆ ಕಲಾಪಕ್ಕೆ ಅಡ್ಡಿಯುಂಟು ಮಾಡಲಿಲ್ಲ. ಸಚಿವರು ಪಕ್ಷವೆತ್ತಿದ ಪ್ರಶ್ನೆಗಳಿಗೆ ಉತ್ತರಿಸಲು ವಿಫಲವಾಗಿದ್ದಾರೆಂದು ನಂತರ ರಾಹುಲ್ ಹೇಳಿದರು.
ಸಚಿವರು ಹಾಗೂ ತಳ ಮಟ್ಟದಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯ ಅಧಿಕಾರಿಗಳ ನಡುವಿನ ಹೊಂದಾಣಿಕೆಯ ಕೊರತೆಯನ್ನು ಇದಕ್ಕೂ ಮುಂಚೆ ಸಿಂಧಿಯಾ ಪಶ್ನಿಸಿದ್ದರು.‘‘ಪಠಾಣ್‌ಕೋಟ್ ದಾಳಿ ನಡೆಯುತ್ತಿದ್ದಾಗ, ಪ್ರಧಾನಿ ಕರ್ನಾಟಕದಲ್ಲಿ ಯೋಗ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುತ್ತಿದ್ದರು ಹಾಗೂ ಕಾರ್ಯಕ್ರಮದ ಬಗ್ಗೆ ಟ್ವೀಟ್ ಮಾಡುತ್ತಿದ್ದರು,’’ಎಂದವರು ಹೇಳಿದ್ದರು. ‘‘ಗೃಹ ಸಚಿವರು ಟ್ವೀಟ್ ಮಾಡಿ ನಾವು ಉಗ್ರರನ್ನು ಕೊಂದಿದ್ದೇವೆ ಎಂದು ಹೇಳಿದ್ದರೆ, ಗೃಹ ಕಾರ್ಯದರ್ಶಿಯವರು ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂದು ಹೇಳಿದ್ದರು. ಈ ಟ್ವೀಟ್‌ಗಳನ್ನು ನಂತರ ಡಿಲೀಟ್ ಮಾಡಲಾಗಿತ್ತು. ಈ ಸಂದರ್ಭ ರಕ್ಷಣಾ ಸಚಿವರು ಗೋವಾದಲ್ಲಿ ಪಕ್ಷ ಕಾರ್ಯಕರ್ತರ ಸಮ್ಮೇಳನವೊಂದರಲ್ಲಿ ಭಾಗವಹಿಸುತ್ತಿದ್ದರು,’’ಎಂದಿದ್ದರು.
‘‘ಟ್ವೀಟ್ ವಿಚಾರದಲ್ಲಿರಾಜನಾಥ್ ಸಿಂಗ್ ಅವರೊಂದಿಗೆ ಹೊಂದಾಣಿಕೆಯ ಕೊರತೆಯನ್ನು ಒಪ್ಪಿಕೊಂಡ ಪಾರಿಕ್ಕರ್’’ ಅದೊಂದು ಟ್ವೀಟ್‌ನಲ್ಲಿ ಸಣ್ಣ ಪ್ರಮಾದವಾಗಿತ್ತು. ಅದನ್ನು ಕೂಡಲೇ ಸರಿ ಪಡಿಸಲಾಯಿತು. ನನ್ನ ಹಾಗೂ ಗೃಹ ಸಚಿವರ ನಡುವೆ ಉತ್ತಮ ಹೊಂದಾಣಿಕೆಯಿದೆ,’’ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News