×
Ad

ಉವೈಸಿಯನ್ನು ‘ರಾಜದ್ರೋಹಿ’ ಎಂದು ಕರೆದ ಪೋಸ್ಟರ್‌ಗಳು ದಿಲ್ಲಿ ನಿವಾಸದ ಮುಂದೆ ಪತ್ತೆ

Update: 2016-03-17 23:07 IST

ಹೊಸದಿಲ್ಲಿ, ಮಾ.17: ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್(ಎಐಎಂಐಎಂ) ಅಧ್ಯಕ್ಷ ಅಸಾದುದ್ದೀನ್ ಉವೈಸಿಯವರನ್ನು ‘ರಾಜದ್ರೋಹಿ’ ಎಂದು ಬ್ರಾಂಡ್ ಮಾಡಿ ಹಾಗೂ ಅವರು ಭಾರತ ಮಾತೆಯನ್ನು ಅವಮಾನಿಸಿದ್ದಾರೆಂದು ಆರೋಪಿಸಿದ ಪೋಸ್ಟರ್‌ಗಳು ಹೊಸದಿಲ್ಲಿಯ ಅವರ ಅಧಿಕೃತ ಅಶೋಕ ರಸ್ತೆಯ ನಿವಾಸದ ಪ್ರವೇಶ ದ್ವಾರದಲ್ಲಿ ಬುಧವಾರ ಸಂಜೆ ಕಾಣಿಸಿಕೊಂಡಿದೆ.

ಹಿಂದೂ ಸೇನಾದ ಕಾರ್ಯಕರ್ತರು ನಿನ್ನೆ ಸಂಜೆ 7 ಗಂಟೆಯ ವೇಳೆ ಅಂಟಿಸಿದ್ದ ಪೋಸ್ಟರ್‌ಗಳನ್ನು ಪೊಲೀಸರು ತೆರವುಗೊಳಿಸಿದರು.
ಉವೈಸಿ ‘ವಂದೇ ಮಾತರಂ’ ಎನ್ನುವುದಿಲ್ಲವೆಂದು ಬಹಿರಂಗವಾಗಿ ಹೇಳಿಕೆ ನೀಡಿದುದರಿಂದ ರೊಚ್ಚಿಗೆದ್ದ ತಮ್ಮ ಕಾರ್ಯಕರ್ತರು ಈ ಪೋಸ್ಟರ್‌ಗಳನ್ನು ಹಾಕಿದ್ದಾರೆ. ಈ ದೇಶದಲ್ಲಿ ರಾಜದ್ರೋಹಿಗಳಿಗೆ ಅವಕಾಶವಿರಬಾರದು ಎಂದು ಹಿಂದೂ ಸೇನಾದ ಅಧ್ಯಕ್ಷ ವಿಷ್ಣು ಗುಪ್ತ ಹೇಳಿದ್ದಾರೆ.
ತಾನು ‘ಭಾರತ್ ಮಾತಾಕೀ ಜೈ’ ಹಾಗೂ ‘ವಂದೇ ಮಾತರಂ’ ಎಂದು ಹೇಳುವುದಿಲ್ಲವೆನ್ನುವ ಮೂಲಕ ಉವೈಸಿ, ದೇಶದ ಮುಸ್ಲಿಮರಿಗೆ ಯಾವ ಸಂದೇಶ ನೀಡಲು ಪ್ರಯತ್ನಿಸುತ್ತಿದ್ದಾರೆ? ಅಂತಹ ಪಾಠಗಳ ಮೂಲಕ ಕೇವಲ ಅವರು ಮುಸ್ಲಿಮರಲ್ಲಿ ರಾಷ್ಟ್ರೀಯತೆ ವಿರೋಧಿ ಭಾವನೆಯನ್ನು ಪ್ರಚೋದಿಸಲು ಯತ್ನಿಸುತ್ತಿದ್ದಾರೆ. ಅವರು ಸಂಸತ್ತಿನಲ್ಲಿ ಕುಳಿತ್ತಿದ್ದಾರೆ ಹಾಗೂ ಭಾರತದ ನಿವಾಸಿಯಾಗಿದ್ದಾರೆ. ಅಂದ ಮೇಲೆ ಅವರಿಗೆ ‘ಭಾರತ್ ಮಾತಾಕೀ ಜೈ’ ಎನ್ನಲು ಸಮಸ್ಯೆಯೇನು? ಅವರು ದೇಶವನ್ನು ಗೌರವಿಸಲು ನಿರಾಕರಿಸುತ್ತಾರಾದರೆ ಪಾಕಿಸ್ತಾನಕ್ಕೆ ಹೋಗಲಿ ಎಂದು ಗುಪ್ತಾ ಹಿಂದೂಸ್ಥಾನ್ ಟೈಂಸ್‌ಗೆ ತಿಳಿಸಿದ್ದಾರೆ.
ತಮಗೆ ಮಾಹಿತಿ ಬಂದೊಡನೆಯೇ ಪೋಸ್ಟರ್‌ಗಳನ್ನು ತೆರವುಗೊಳಿಸಿದ್ದೇವೆ. ಗುಪ್ತಾರನ್ನು ಸ್ಪಷ್ಟೀಕರಣಕ್ಕಾಗಿ ಕರೆಸಲಾಗುವುದೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಯುವ ಜನಾಂಗದಲ್ಲಿ ದೇಶಭಕ್ತಿಯನ್ನು ತುಂಬಬೇಕೆಂಬ ಆರೆಸ್ಸೆಸ್ ವರಿಷ್ಠ ಮೋಹನ ಭಾಗವತ್‌ರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಉವೈಸಿ, ತನ್ನ ಕುತ್ತಿಗೆಗೆ ಚೂರಿಯನ್ನಿರಿಸಿದರೂ ತಾನು ‘ಭಾರತ್ ಮಾತಾಕೀ ಜೈ’ ಎನ್ನಲಾರೆ. ತಾನು ಆ ಘೋಷಣೆ ಕೂಗಲಾರೆ. ತಾವೇನು ಮಾಡುತ್ತೀರಿ ಭಾಗವತ್ ಸಾಹೇಬರೇ ಎಂದು ಈ ಮೊದಲು ಸವಾಲು ಹಾಕಿದ್ದರು.
ಅವರು ಈ ಮಾತನ್ನು ಫೆ.13ರಂದು ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಉದ್ಗೀರ್ ತಹಸೀಲ್‌ನಲ್ಲಿ ನಡೆದ ರ್ಯಾಲಿಯೊಂದರ ವೇಳೆ ಹೇಳಿದ್ದರು.
 ಉವೈಸಿಯವರ ನಿವಾಸದ ಹೊರಗೆ ಪೋಸ್ಟರ್ ಹಚ್ಚಿದವರ ಗುರುತು ಪತ್ತೆಗೆ ತಾವು ಪ್ರಯತ್ನಿಸುತ್ತಿದ್ದೇವೆಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News