‘ಭಾರತ್ ಮಾತಾಕಿ ಜೈ’ ಎನ್ನದವರ ಪೌರತ್ವ ರದ್ದುಗೊಳಿಸಿ: ಶಿವಸೇನೆ
ಮುಂಬೈ, ಮಾ.17: ‘ಭಾರತ್ ಮಾತಾಕೀ ಜೈ’ ಎಂಬ ಘೋಷಣೆ ಕೂಗಲು ನಿರಾಕರಿಸುವವರ ಪೌರತ್ವ ಹಾಗೂ ಮತದಾನದ ಹಕ್ಕನ್ನು ರದ್ದುಗೊಳಿಸಬೇಕೆಂದು ಶಿವಸೇನೆ ಗುರುವಾರ ಆಗ್ರಹಿಸಿದೆ. ಎಐಎಂಐಎಂ ನಾಯಕ ಅಸಾದುದ್ದೀನ್ ಉವೈಸಿ, ಈ ರೀತಿ ಘೋಷಣೆ ಕೂಗಲು ನಿರಾಕರಿಸಿದ ಬಳಿಕ ಅದರ ಈ ಆಗ್ರಹ ಹೊರಬಿದ್ದಿದೆ.
ಭಾರತ ಪರ ಘೋಷಣೆ ಕೂಗಲು ನಿರಾಕರಿಸಿದ ಉವೈಸಿಯವರನ್ನು ಹೇಗೆ ರಾಜ್ಯದಿಂದ ಹೊರಹೋಗಲು ಬಿಡಲಾಯಿತೆಂಬುದನ್ನು ತಿಳಿಸುವಂತೆ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ರನ್ನು ಶಿವಸೇನೆ ಒತ್ತಾಯಿಸಿದೆ.
ಹಾರ್ದಿಕ್ ಪಟೇಲ್ ಪ್ರಮಾದದಿಂದ ರಾಷ್ಟ್ರಧ್ವಜವನ್ನು ಅಪಮಾನಿಸಿದರು. ಅವರು ದೇಶದ್ರೋಹದ ಆರೋಪದಲ್ಲಿ ಈಗಲೂ ಕಾರಾಗೃಹದಲ್ಲಿದ್ದಾರೆ. ಅಸಾದುದ್ದೀನ್ ಉವೈಸಿ ಸಹ ಭಾರತ ಮಾತೆಯನ್ನು ಅವಮಾನಿಸುವ ಮೂಲಕ ರಾಷ್ಟ್ರದ್ರೋಹ ಮಾಡಲಿಲ್ಲವೇ? ಭಾರತ್ ಮಾತಾಕೀ ಜೈ’ ಎನ್ನದ ಎಲ್ಲರ ಪೌರತ್ವ ಹಾಗೂ ಮತದಾನದ ಹಕ್ಕನ್ನು ರದ್ದುಪಡಿಸಬೇಕು ಎಂದು ಶಿವಸೇನೆಯ ಮುಖವಾಣಿ ‘ಸಾಮ್ನಾ’ದ ತೀಕ್ಷ್ಣ ಸಂಪಾದಕೀಯವೊಂದು ಹೇಳಿದೆ.
ರಾಜ್ಯದಲ್ಲಿ ಬಿಜೆಪಿಯ ಮುಖ್ಯಮಂತ್ರಿಯಿದ್ದಾರೆ. ದೇಶವನ್ನು ಅವಮಾನಿಸಿದ ಉವೈಸಿಯವರನ್ನು ಲಾತೂರ್‌ನಿಂದ ಹೋಗಲು ಹೇಗೆ ಅವಕಾಶ ನೀಡಲಾಯಿತೆಂಬುದಕ್ಕೆ ಅವರು ಉತ್ತರಿಸಬೇಕೆಂದು ಅದು ಆಗ್ರಹಿಸಿದೆ.
ಉವೈಸಿಯವರ ವಿರುದ್ಧ ವಾಗ್ದಾಳಿ ಮುಂದುವರಿಸಿದ ಸಂಪಾದಕೀಯ, ಅವರಂತಹವರು ಹರಡುವ ಚಿಂತನೆಗಳಿಂದಾಗಿಯೇ ಮುಸ್ಲಿಮ್ ಸಮುದಾಯವು ‘ಹಿಂದುಳಿದಿದೆ’ ಎಂದು ಶಿವಸೇನೆ ಹೇಳಿದೆ.
ಆದಾಗ್ಯೂ, ಶಿವಸೇನೆಯು ಕೇವಲ ರಾಜಕೀಯ ಆಷಾಢಭೂತಿತನವನ್ನು ತೋರಿಸುತ್ತಿದೆಯೆಂದು ಮಹಾರಾಷ್ಟ್ರ ಕಾಂಗ್ರೆಸ್‌ನ ವಕ್ತಾರ ಅಲ್-ನಝೀರ್ ಝಕಾರಿಯಾ ಟೀಕಿಸಿದ್ದಾರೆ.
ಇದು ಆಷಾಢಭೂತಿತನದ ಪರಮಾವಧಿಯಾಗಿದೆ. ಒಂದೆಡೆಯಿಂದ ಶಿವಸೇನೆ ಇತರರಿಗೆ ದೇಶಭಕ್ತಿಯ ಪಾಠ ಹೇಳುತ್ತಿದೆ. ಇನ್ನೊಂದೆಡೆ ಅದರ ಆಡಳಿತದ ಬಿಬಿಎಂಪಿಯಲ್ಲಿ ಭಾರೀ ಭ್ರಷ್ಟಾಚಾರ ನಡೆಸುತ್ತಿದೆ. ವಿವಿಧ ಉದ್ದೇಶಗಳಿಗಾಗಿ ನೀಡಲಾಗಿರುವ ಗುತ್ತಿಗೆಗಳಲ್ಲಿ ನೂರಾರು ಕೋಟಿ ರೂ. ಅವ್ಯವಹಾರ ನಡೆದಿದೆ ಎಂದವರು ಆರೋಪಿಸಿದ್ದಾರೆ.
ಶಿವಸೇನೆ ಶುದ್ಧ ಹಸ್ತವಾಗಿ ಹೊರ ಬಂದ ಬಳಿಕವೇ, ಅದರ ಮಿತ್ರ ಪಕ್ಷ ಬಿಜೆಪಿ ಸಹ ಅದನ್ನು ಗಂಭೀರವಾಗಿ ಪರಿಗಣಿಸುತ್ತದೆಂಬುದನ್ನು ಅದು ತಿಳಿದುಕೊಳ್ಳುವುದು ಒಳ್ಳೆಯದು. ಕೇವಲ ಘೋಷಣೆ ಕೂಗುವುದರಿಂದ ಅವರು ರಾಷ್ಟ್ರವಾದಿಗಳಾಗಲಾರರೆಂದು ಝಕಾರಿಯಾ ತಿವಿದಿದ್ದಾರೆ.
ಆರೆಸ್ಸೆಸ್ ಹಾಗೂ ಬಿಜೆಪಿಗಳ ಅಭಿಪ್ರಾಯಗಳನ್ನು ಪ್ರತಿಯೊಬ್ಬರೂ ಒಪ್ಪಲಾರರೆಂದು ಎನ್‌ಸಿಪಿ ವಕ್ತಾರ ನವಾಬ್ ಮಲಿಕ್ ಹೇಳಿದ್ದಾರೆ.