ಮುಸ್ಲಿಂ ಹೆಸರಿನ ಬಗ್ಗೆ ಶಕುಂತಳಾ ಶೆಟ್ಟಿಯವರ ಅಸಹಿಷ್ಣುತೆಗೆ ಕಾರಣ ಕೇಳಿ
ಗೌರವಾನ್ವಿತ ನಾಯಕರೂ ದ.ಕ.ಜಿಲ್ಲೆಯ ಉಸ್ತುವಾರಿ ಸಚಿವರೂ ಆದ ಸನ್ಮಾನ್ಯ ಶ್ರೀ ಬಿ.ರಮಾನಾಥ್ ರೈ ಯವರ ಸಮಕ್ಷಮಕ್ಕೆ(ಸ್ವಗತವಾಗಿ)
ಪ್ರಿಯರೇ,
ಜಿಲ್ಲೆಯ ಮುಸ್ಲಿಮರ ಪೈಕಿ ಹೆಚ್ಚಿನವರು ತಮ್ಮನ್ನು ಅತಿಯಾದ ಗೌರವ, ಪ್ರೀತಿ, ವಿಶ್ವಾಸ ದಿಂದ ಕಾಣುತ್ತಾ ಬಂದಿದ್ದಾರೆ. ನಿಮ್ಮ ಮತ್ತು ಜನಾರ್ದನ ಪೂಜಾರಿ ಯವರ ಮೇಲಿರುವ ನಂಬಿಕೆಯೇ ಇನ್ನೂ ಜಿಲ್ಲೆಯಲ್ಲಿ ಮುಸ್ಲಿಮರ ಬಹುಪಾಲು ಮತ ಕಾಂಗ್ರೆಸ್ ಪಾಲಾಗುತ್ತಿರುವುದಕ್ಕೆ ಕಾರಣ.
ಕಲ್ಲಡ್ಕ ಭಟ್ಟರನ್ಶು ಜೈಲಿಗಟ್ಟುವೆ ಎಂದು ಭರವಸೆ ನೀಡಿದ ಸಿದ್ಧರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾದರೂ ಕೋಮುಗಲಭೆಗೆ ಪ್ರೇರಕ ಶಕ್ತಿ ಯಂತಿರುವ ಪ್ರಭಾಕರ್ ಭಟ್ಟರಿಗೆ ಜೈಲು ಭಾಗ್ಯ ಒದಗಿಸಲಾಗಿಲ್ಲ ! ಈಗಲೂ ಭಟ್ಟರು ಮುಸ್ಲಿಮರನ್ನು ಅವಹೇಳನ ಮಾಡುತ್ತಲೇ ಇದ್ಲಾರೆ, ತನ್ನ ನ್ನು ಜೈಲಿಗೆ ಕಳುಹಿಸುವ ವ್ಯಕ್ತಿಯೂ ಇಲ್ಲ, ಶಕ್ತಿ ಯೂ ಇಲ್ಲ ಎಂಬಂತೆ ವಿರಾಜಮಾನವಾಗಿದ್ದಾರೆ. ಇದರ ಮಧ್ಯೆ ಈಗ ಪಕ್ಷದ ಜಿಲ್ಲೆಯ ಶಾಸಕಿಯೇ ಮುಸ್ಲಿಮ್ ಹೆಸರಿನ ವಿರುದ್ಧ ಬಹಿರಂಗವಾಗಿ ಅಸಹಿಷ್ಣುತೆ ಪ್ರಕಟಿಸಿರುವುದು ಮುಸ್ಲಿಮರನ್ನು ಕಂಗೆಡಿಸಿವೆ.
ಜಿಲ್ಲಾಧಿಕಾರಿಯ ಮುಸ್ಲಿಮ್ ಹೆಸರನ್ನು ಅಳಿಸಿಯೇ ಸಿದ್ಧ ಎನ್ನುವ ಶಕುಂತಳಾ ಶೆಟ್ಟಿ ಕಾಂಗ್ರೆಸ್ ಶಾಸಕಿಯಾಗಿರುವುದು ಕಾಂಗ್ರೆಸ್ ಸಿದ್ಧಾಂತವನ್ನು ಅಣಕಿಸಿದಂತೆ!.
"ನಾನು ಶಾಸಕಿಯಾಗಿರುವ ತನಕ ಪುತ್ತೂರಿನಲ್ಲಿ ಕೋಮುಗಲಭೆಯಾಗಲು ಬಿಡುವುದಿಲ್ಲ " ಎಂಬ ಶಾಸಕಿಯ ಮಾತು ಮುಸ್ಲಿಮರಲ್ಲಿ ಧೈರ್ಯ ತುಂಬುವ ಬದಲು ಭವಿಷ್ಯದ ದಿನಗಳನ್ನು ನೆನೆದು ಆತಂಕದಲ್ಲಿ ಕೆಡವಿವೆ!. ಕಾಂಗ್ರೆಸ್ ತತ್ವಕ್ಕೆ ಬದ್ಧತೆ ತೋರದಿದ್ದರೆ ಕ್ರಮ ಜರುಗಿಸ ಬೇಕಾದ ಜರೂರತೆಯನ್ನು ಕಾಂಗ್ರೆಸ್ ಸಂವಿಧಾನ ಒತ್ತಿ ಹೇಳುತ್ತದೆ. ಕಾಂಗ್ರೆಸ್ ನ ಒಳಗೂ ಸಂಘ ಪರಿವಾರದ ಆದೇಶ ಪಾಲಿಸುವವರಿದ್ದಾರೆ ಎಂಬ ಕುಹಕದ ಮಾತನ್ನು ಸತ್ಯವಾಗಿಸಿದ ಶಕುಂತಳಾ ಶೆಟ್ಟಿಯ ಬಹಿರಂಗ ಹೇಳಿಕೆ ಜಿಲ್ಲೆಯ ಮುಸ್ಲಿಮರಲ್ಲಿ ಮನೆ ಮಾಡಿರುವ ಅಭದ್ರತೆ ಮತ್ತು ಅಪನಂಬಿಕೆಯನ್ನು ಇಮ್ಮಡಿಗೊಳಿಸಿರುವ ಈ ದಿನಗಳಲ್ಲಿ ಸಮಯೋಚಿತವಾಗಿ ಸ್ಪಂದಿಸಿ ಜಿಲ್ಲೆಯ ಸಾಮರಸ್ಯವನ್ನು ಕಾಪಾಡುವ ಸಾಮರ್ಥ್ಯ ಶುದ್ಧ ಜಾತ್ಯಾತೀತ ಮನಸ್ಸುಳ್ಳ ತಮಗಿದೆ.
ದಯವಿಟ್ಟು ಕಾಃಗ್ರೇಸ್ ತತ್ವಕ್ಕೆ ಅಪಚಾರ ಎಸಗಿದ ಶಕುಂತಳಾ ಶೆಟ್ಟಿ ಯ ನಿಲುವಿಗೆ ಕಾರಣ ಕೇಳಿ ಎಂದು ವಿನಂತಿಸಿ ಕೊಳ್ಳುವೆ.
ಇತೀ, ನಿಮ್ಮವ.
ಫಾರೂಕ್ ಉಳ್ಳಾಲ್.
ಉಳ್ಳಾಲ ನಗರಸಭೆಯ ಕಾಂಗ್ರೆಸ್ ಸದಸ್ಯ ಹಾಗು ಜಿಲ್ಲಾ ಕಾಂಗ್ರೆಸ್ ವಕ್ತಾರ