×
Ad

ಮೇವಾರ್ ವಿವಿಯಲ್ಲಿದ್ದುದು ಗೋಮಾಂಸವಲ್ಲ!: ಬಂಧಿತ ವಿದ್ಯಾರ್ಥಿಗಳಿಗೆ ಜಾಮೀನು

Update: 2016-03-17 23:54 IST

ಜೈಪುರ, ಮಾ.17: ರಾಜಸ್ಥಾನದ ಮೇವಾರ ವಿಶ್ವವಿದ್ಯಾನಿಲಯದ ಹಾಸ್ಟೆಲ್‌ನಲ್ಲಿ ಗೋಮಾಂಸ ಬೇಯಿಸುತ್ತಿದ್ದ ಆರೋಪದಲ್ಲಿ ಮಂಗಳವಾರ ಬಂಧಿಸಲ್ಪಟ್ಟಿದ್ದ ನಾಲ್ವರು ಕಾಶ್ಮೀರಿ ಪದವಿ ವಿದ್ಯಾರ್ಥಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಬೇಯಿಸುತ್ತಿದ್ದುದು ಗೋಮಾಂಸವಲ್ಲವೆಂದು ತಜ್ಞರ ಮಂಡಳಿಯೊಂದು ಖಚಿತಪಡಿಸಿದ ಬಳಿಕ, ಚಿತ್ತೋರ್‌ಗಡದ ಗಂಗ್ರಾರ್ ಉಪ ವಿಭಾಗೀಯ ದಂಡಾಧಿಕಾರಿಯ ನ್ಯಾಯಾಲಯವು ಅವರಿಗೆ ಜಾಮೀನು ನೀಡಿದೆ.

ಆರೋಪಿ ವಿದ್ಯಾರ್ಥಿಗಳಾದ ಶಾಕಿಬ್ ಅಶ್ರಫ್, ಹಿಲಾಲ್ ಫಾರೂಕ್,ಮುಹಮ್ಮದ್ ಮಕ್ಬೂಲ್ ಹಾಗೂ ಶೌಕತ್ ಅಲಿ ಎಂಬವರು ತಮ್ಮ ಹಾಸ್ಟೆಲ್ ಕೊಠಡಿಯಲ್ಲಿ ಗೋಮಾಂಸ ಬೇಯಿಸುತ್ತಿದ್ದಾರೆಂಬ ಗಾಳಿ ಸುದ್ದಿ ಸೋಮವಾರ ರಾತ್ರಿ ಹರಡಿತ್ತು. ಶೇ. 100 ಸಸ್ಯಾಹಾರಿ ಸಂಸ್ಥೆ ಎನ್ನಲಾಗಿರುವ ಮೇವಾರ ವಿವಿಯ ಮುಂದೆ ಕೆಲಸದವರು ಸೇರಿ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಪೊಲೀಸರು 21ರಿಂದ 27ರ ಹರೆಯದ ನಾಲ್ವರು ವಿದ್ಯಾರ್ಥಿಗಳನ್ನು ಮರುದಿನ ಐಪಿಸಿ ಸೆ.152ರನ್ವಯ ಬಂಧಿಸಿದ್ದರು

ಮಾಂಸವನ್ನು ಹಾಸ್ಟೆಲ್‌ಗೆ ತಂದು ಬೇಯಿಸಿದುದರಲ್ಲಿ ಆರೋಪಿ ವಿದ್ಯಾರ್ಥಿಗಳ ಪಾತ್ರದ ಬಗ್ಗೆ ವಿಚಾರಣೆ ನಡೆಸಲಾಯಿತು.ಹಾಸ್ಟೆಲ್‌ನಿಂದ ಸಂಗ್ರಹಿಸಲಾದ ಮಾಂಸದ ಮಾದರಿಯ ಪರೀಕ್ಷೆಗಾಗಿ ಪಶುವೈದ್ಯಕೀಯ ಸಮಿತಿಯೊಂದನ್ನು ರಚಿಸಲಾಯಿತು. ಆದರೆ, ಅದು ಗೋಮಾಂಸವಲ್ಲವೆಂದು ಸಮಿತಿ ತೀರ್ಮಾನಕ್ಕೆ ಬಂದಿದೆ. ಅವರು ಸ್ಥಳೀಯ ಅಂಗಡಿಯೊಂದರಿಂದ 300 ಗ್ರಾಂಗಳಷ್ಟು ಬೇರೆ ಯಾವುದೋ ಮಾಂಸ ಖರೀದಿಸಿದ್ದರೆಂಬುದು ತನಿಖೆಯಿಂದ ತಿಳಿದು ಬಂದಿದೆಯೆಂದು ಗಂಗ್ರಾರ್ ಠಾಣಾಧಿಕಾರಿ ಲಾಭುರಾಮ್ ಬಷ್ಣೋಯಿ ತಿಳಿಸಿದ್ದಾರೆ.

ಸಂಸ್ಥೆಯ ಎರಡು ವಿದ್ಯಾರ್ಥಿ ಗುಂಪುಗಳ ನಡುವಿನ ದ್ವೇಷದಿಂದಾಗಿ ಇಡೀ ಪ್ರಕರಣ ನಡೆದಿದೆ. ತಾವು ಎರಡೂ ಗುಂಪುಗಳಿಗೆ ಕೌನ್ಸಿಲಿಂಗ್ ಮಾಡುತ್ತಿದ್ದೇವೆ ಹಾಗೂ ಘಟನೆಯ ಕುರಿತು ಪರಿಶೀಲಿಸಲು ತನಿಖಾ ಸಮಿತಿಯೊಂದನ್ನು ರಚಿಸಿದ್ದೇವೆಂದು ವಿವಿಯ ಪಿಆರ್‌ಒ, ಹರೀಶ್ ಗುರ್ನಾನಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News