×
Ad

ಜರ್ಮನ್ ಬೇಕರಿ ಸ್ಫೋಟ ಪ್ರಕರಣ: ಹಿಮಾಯತ್ ಬೇಗ್ ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ತಗ್ಗಿಸಿದ ಹೈಕೋರ್ಟ್

Update: 2016-03-17 23:56 IST

ಮುಂಬೈ, ಮಾ.17: 2010 ರಲ್ಲಿ ಪುಣೆಯ ಜರ್ಮನ್ ಬೇಕರಿಯಲ್ಲಿ ಸಂಭವಿಸಿದ್ದ ಸ್ಫೋಟ ಪ್ರಕರಣದಲ್ಲಿ ಏಕೈಕ ದೋಷಿಯಾಗಿರುವ ಹಿಮಾಯತ್ ಬೇಗ್‌ಗೆ ವಿಧಿಸಲಾಗಿದ್ದ ಮರಣ ದಂಡನೆಯನ್ನು ಬಾಂಬೆ ಉಚ್ಚ ನ್ಯಾಯಾಲಯವು ಗುರುವಾರ ರದ್ದುಗೊಳಿಸಿದ್ದು, ಇದು ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳಕ್ಕೆ ತೀವ್ರ ಹಿನ್ನಡೆಯನ್ನುಂಟು ಮಾಡಿದೆ. ಆದರೆ ಸ್ಫೋಟಕಗಳನ್ನು ಹೊಂದಿದ್ದಕ್ಕಾಗಿ ಜೀವಾವಧಿ ಶಿಕ್ಷೆಯನ್ನು ಅದು ಎತ್ತಿ ಹಿಡಿದಿದೆ.

ಬೇಗ್ ವಿರುದ್ಧದ ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ,ಐಪಿಸಿಯ ಕಲಂ 120-ಬಿ(ಕ್ರಿಮಿನಲ್ ಒಳಸಂಚು), 302(ಕೊಲೆ) ಮತ್ತು 307(ಕೊಲೆಯತ್ನ) ಸೇರಿದಂತೆ ಒಂಬತ್ತು ಆರೋಪಗಳಿಂದ ಆತನನ್ನು ಖುಲಾಸೆಗೊಳಿಸಿದ ನ್ಯಾಯಾಲಯವು, ಆರ್‌ಡಿಎಕ್ಸ್ ಹೊಂದಿದ್ದ ಮತ್ತು ಮೊಬೈಲ್ ಸಿಮ್ ಪಡೆದುಕೊಳ್ಳಲು ನಕಲಿ ದಾಖಲೆಗಳನ್ನು ಸಲ್ಲಿಸಿದ್ದ ಆರೋಪಗಳನ್ನು ಎತ್ತಿಹಿಡಿಯಿತು.

2013ರಲ್ಲಿ ಪುಣೆಯ ಸೆಷನ್ಸ್ ನ್ಯಾಯಾಲ ಯವು ಬೇಗ್‌ನನ್ನು ದೋಷಿ ಯೆಂದು ಘೋಷಿಸಿ ಮರಣದಂಡನೆಯನ್ನು ವಿಧಿಸಿತ್ತು. ಇದನ್ನು ಪ್ರಶ್ನಿಸಿ ಆತ ಉಚ್ಚನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದ. ಇದೇ ವೇಳೆ ಪ್ರಕರಣದ ಸಾಕ್ಷಿಗಳಿಬ್ಬರು ಸಹ ಅರ್ಜಿಗಳನ್ನು ಸಲ್ಲಿಸಿ ತಮ್ಮ ಹೇಳಿಕೆಗಳನ್ನು ಒತ್ತಡದಲ್ಲಿ ಪಡೆದುಕೊಂಡಿದ್ದರಿಂದ ಹೊಸದಾಗಿ ತಮ್ಮ ಹೇಳಿಕೆಗಳನ್ನು ದಾಖಲಿಸಿಕೊಳ್ಳಬೇಕು ಎಂದು ಕೋರಿದ್ದರು. ಬೇಗ್‌ನನ್ನು ಆರೋಪ ಮುಕ್ತಗೊಳಿಸಿರುವುದರಿಂದ ಈ ಅರ್ಜಿಗಳ ಕುರಿತು ತಾನು ಪ್ರತ್ಯೇಕ ಆದೇಶಗಳನ್ನು ಹೊರಡಿಸಬೇಕಿಲ್ಲ ಎಂದು ನ್ಯಾಯಾಲಯವು ಹೇಳಿತು.

ಪುಣೆಯ ಕೋರೆಗಾಂವ್ ಪಾರ್ಕ್ ಪ್ರದೇಶದಲ್ಲಿಯ ಜರ್ಮನ್ ಬೇಕರಿಯಲ್ಲಿ ಸಂಭವಿಸಿದ್ದ ಸ್ಫೋಟದಲ್ಲಿ 17ಜನರು ಸತ್ತು,58ಜನರು ಗಾಯ ಗೊಂಡಿದ್ದರು. ಈ ಪೈಕಿ ಕೆಲವು ವಿದೇಶಿ ಪ್ರಜೆಗಳೂ ಇದ್ದರು.

2010,ಸೆಪ್ಟಂಬರ್‌ನಲ್ಲಿ ಬೇಗ್‌ನನ್ನು ಲಾತೂರಿನಲ್ಲಿ ಬಂಧಿಸಲಾಗಿತ್ತು ಮತ್ತು ಅಲ್ಲಿಯ ಆತನ ನಿವಾಸದಿಂದ 1,200 ಕೆ.ಜಿ.ಆರ್‌ಡಿಎಕ್ಸ್‌ನ್ನು ವಶಪಡಿಸಿಕೊಳ್ಳಲಾಗಿತ್ತು. ಬೇಗ್ ಜೊತೆ ಇನ್ನೋರ್ವ ಆರೋಪಿ ಕಾತೀಲ್ ಸಿದ್ದಿಕಿಯನ್ನೂ ಬಂಧಿಸಲಾಗಿತ್ತು,ಆದರೆ ಆತ ಪುಣೆಯ ಯೆರವಾಡಾ ಜೈಲಿನಲ್ಲಿ ಕೈದಿಗಳ ನಡುವಿನ ಘಷರ್ಣೆಯಲ್ಲಿ ಸಾವನ್ನಪ್ಪಿದ್ದ.

ಐಎಮ್‌ನ ಉಗ್ರರಾದ ಯಾಸಿನ್ ಭಟ್ಕಳ, ಮೊಹ್ಸಿನ್ ಚೌಧರಿ,ರಿಯಾಝ್ ಭಟ್ಕಳ,ಇಕ್ಬಾಲ್ ಇಸ್ಮಾಯೀಲ್ ಭಟ್ಕಳ, ಫಯ್ಯಾಝ್ ಕಾಗ್ಝಿ ಮತ್ತು ಸಯ್ಯದ್ ಝಬಿಯುದ್ದೀನ್ ಅನ್ಸಾರಿ ಶೇಖ್ ಪ್ರಕರಣದ ಇತರ ಆರೋಪಿಗಳಾಗಿದು,್ದ ತಲೆ ಮರೆಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News