ಆದ್ಯವಚನಕಾರ ಜೇಡರ ದಾಸಿಮಯ್ಯನೋ ದೇವರ ದಾಸಿಮಯ್ಯನೋ?
ಮಾನ್ಯರೆ,ದೇವರ ದಾಸಿಮಯ್ಯ ಒಬ್ಬ ಆದ್ಯವಚನಕಾರ ಎಂದು ಗುರುತಿಸಿ ಈತನ ಹೆಸರಿನಲ್ಲಿ ಸರಕಾರವು ಜಯಂತ್ಯೋತ್ಸವವನ್ನು ಕಳೆದ ವರ್ಷದಿಂದ ಆಚರಿಸುತ್ತಿರುವುದು ಸರಿಯಷ್ಟೆ. ಈಗ ಮತ್ತೊಮ್ಮೆ ಆಚರಣೆ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಸಾಹಿತಿಗಳು, ಚಿಂತಕರು, ಸಂಶೋಧಕರು ದೇವರದಾಸಿಮಯ್ಯ ಹೆಸರಿನಡಿ ಆಚರಣೆ ಬೇಡ ಎಂದು ಜೇಡರ ದಾಸಿಮಯ್ಯನ ಹೆಸರಿನಡಿಯೇ ಆಚರಿಸುವುದು ಸೂಕ್ತ ಎಂದು ಪ್ರತಿಭಟಿಸಿದ್ದೂ ಉಂಟು. ಕ್ರಿ.ಶ.1040ರಲ್ಲಿ ಗುಲ್ಬರ್ಗ ಮುದೆನೂರು ಗ್ರಾಮದ ಕಾಮಯ್ಯ ಶಂಕರಿ ಎಂಬ ದಂಪತಿಗೆ ಒಂದು ಗಂಡು ಮಗು ಇತ್ತು. ಇವರದು ನೇಯ್ಗೆ ಕಾಯಕ. ಹಾಗಾಗಿ ಇವರನ್ನು ಜೇಡರು, ನೇಕಾರರು ಎಂದು ಕುಲವೃತ್ತಿಯಿಂದ ಕರೆಯುತ್ತಿದ್ದರು. ಈ ದಂಪತಿಯ ಮಗುವಿಗೆ ದಾಸಿಮಯ್ಯ ಎಂಬ ನಾಮಕರಣದಿಂದಾಗಿ ಈತನನ್ನು ಜೇಡರ ದುಗ್ಗೆಳೆಯೊಂದಿಗೆ ಮದುವೆ ಮಾಡುತ್ತಾರೆ.ೇಡರ ದಾಸಿಮಯ್ಯ ಒಬ್ಬ ಭಾವಜೀವಿ. ಆತ ತನ್ನ ಮನಸ್ಸಿಗೆ ತೋಚಿದ ಭಾವನೆಗಳನ್ನು ಸರಳ ಪದಗಳಲ್ಲಿ ಎಲ್ಲರಿಗೂ ಅರ್ಥ ಆಗುವ ಹಾಗೆ ಪದ್ಯಗಳನ್ನು ಬರೆಯುತ್ತಿದ್ದ. ಮುಂದೆ ಇವು ವಚನಗಳೆಂದು ಕರೆಯಲಾಗಿತ್ತು. ಈತನ ಕಾವ್ಯನಾಮ ರಾಮನಾಥ. ಆತನ ಊರಿನಲ್ಲಿ ರಾಮನಾಥ ದೇವರು ಇತ್ತು. ಜೇಡರ ದಾಸಿಮಯ್ಯನು ಸುತ್ತಮುತ್ತಲಿನ ಸಮಾಜದಲ್ಲಿ ನಡೆಯುತ್ತಿದ್ದ ವಂಚನೆ, ಮೋಸ, ಭ್ರಷ್ಟತೆ, ಕುರಿತಾಗಿ ನೊಂದು ಅಂಕು ಡೊಂಕುಗಳನ್ನು ತಿದ್ದಿ ಸಮಾಜ ಸುಧಾರಣೆಯತ್ತ ಗಮನಹರಿಸಿದ ಮಹನೀಯ. ಈತ ಸುಮಾರು ನೂರಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದು ದುಗ್ಗಳೆಯೂ ಸಹ ಶರಣೆ, ಸಾಧ್ವಿ ಹಾಗೂ ಪತಿಗೆ ತಕ್ಕ ಪತ್ನಿ ಮತ್ತು ವಚನಗಾರ್ತಿ ಕೂಡ ಎಂದು ಜೇಡರ ದಾಸಿಮಯ್ಯನ ವಚನಗಳು ಹಾಗೂ ಜೀವನಚರಿತ್ರೆಯಿಂದ ತಿಳಿದು ಬರುತ್ತದೆ. ಇಷ್ಟು ಜೇಡರ ದಾಸಿಮಯ್ಯನ ವಿವರಣೆ. ದೇವರದಾಸಿಮಯ್ಯ ಹೆಸರಿನ ಬಗ್ಗೆ ಗಮನಿಸಿದರೆ ಈತ ಒಬ್ಬ ಶಿವಭಕ್ತ ಜೇಡರ ದಾಸಿಮಯ್ಯನ ಕಾಲದವನು. ಈತನ ಜೀವನ ಚರಿತ್ರೆ, ವೈವಾಹಿಕ ಜೀವನ, ತಂದೆ-ತಾಯಿ, ಕುಲವೃತ್ತಿ, ವಚನ ರಚನೆಗಳ ಕುರಿತ ಮಾಹಿತಿ ಕಂಡುಬರುವುದಿಲ್ಲ. ಈತ ಅವಿವಾಹಿತ ಎಂದು ಹೇಳಲಾಗುತ್ತಿದೆ. ಚನ್ನಬಸವ ಪುರಾಣದಲ್ಲಿ ದೇವರದಾಸಿಮಯ್ಯನ ಹೆಸರು, ವೃಷಭೇಂದ್ರ ವಿಜಯದಲ್ಲಿ ಜೇಡರ ದಾಸಿಮಯ್ಯ ಹಾಗೂ ಶೂನ್ಯ ಸಂಪಾದನೆಯಲ್ಲಿ ಶಂಕರ ದಾಸಿಮಯ್ಯನ ಹೆಸರುಗಳು ಉಲ್ಲೇಖವಾಗಿವೆ. ಜೇಡರ ದಾಸಿಮಯ್ಯ ನೇಕಾರ, ಶಂಕರ ದಾಸಿಮಯ್ಯ ದರ್ಜಿ ಎಂಬುದಾಗಿ ತಿಳಿದಿದ್ದು ದೇವರ ದಾಸಿಮಯ್ಯನ ವೃತ್ತಿ ಸಿಗುವುದಿಲ್ಲ. ದೇವರ ದಾಸಿಮಯ್ಯನೇ ಜೇಡರ ದಾಸಿಮಯ್ಯ. ಇವರಿಬ್ಬರ ಹೆಸರು ಒಂದೇ ವ್ಯಕ್ತಿಯ ಹೆಸರು ಎಂಬುದಾಗಿ ಎಲ್ಲೂ ಸಮರ್ಥನೀಯ ಉಲ್ಲೇಖಗಳು ಕಂಡುಬಂದಿಲ್ಲ. ವಸ್ತುಸ್ಥಿತಿ ಹೀಗಿರುವಾಗ ಆದ್ಯ ವಚನಕಾರನ ಅರ್ಹವ್ಯಕ್ತಿ ಬಗ್ಗೆ ಗೊಂದಲ ಉಂಟಾಗಿ ಡಾ.ಎಂ.ಚಿದಾನಂದಮೂರ್ತಿ ಮತ್ತಿತರರು ಜೇಡರ ದಾಸಿಮಯ್ಯನೇ ಆದ್ಯ ವಚನಕಾರನೆಂದು ಈ ಹೆಸರಿನಿಂದಲೇ ಜಯಂತಿ ಆಚರಣೆ ಮಾಡಬೇಕೆಂದು ಹಠ ಹಿಡಿದಿದ್ದು ಪ್ರತಿಭಟಿಸಿದ್ದು. ಸರಕಾರವು ಜೇಡರ ದಾಸಿಮಯ್ಯ-ದೇವರ ದಾಸಿಮಯ್ಯ ಇವರಿಬ್ಬರಲ್ಲಿ ಅದ್ಯವಚನಕಾರ ಯಾರು? ಎಂಬ ಸ್ಪಷ್ಟ ನಿಲುವು ತಳೆದಿಲ್ಲ ಸಮಸ್ಯೆ ಹಾಗೆಯೇ ಇದೆ. ಪರಿಹಾರ ಕಂಡುಕೊಳ್ಳದೆ ಇದ್ದಲ್ಲಿ ಮತ್ತಷ್ಟು ಪ್ರತಿಭಟನೆಯಾದೀತು. ಇನ್ನಾದರೂ ಸರಕಾರವು ಈ ಬಗ್ಗೆ ಬುದ್ಧಿಜೀವಿಗಳೊಂದಿಗೆ ಚರ್ಚಿಸಿ ಅರ್ಹ ಅದ್ಯವಚನಕಾರನ ಹೆಸರು ಖಚಿತಪಡಿಸಿಕೊಂಡು ಮುಂಬರುವ ಆಚರಣೆಯನ್ನು ಸುಸೂತ್ರವಾಗಿ ಆಚರಿಸಲಿ.ಇಲ್ಲದಿದ್ದಲ್ಲಿ ಅರ್ಹ ಆದ್ಯವಚನಕಾರನಿಗೆ ಅವಮಾನ ಮಾಡಿದಂತಾಗುತ್ತದೆ.