ಸರಕಾರಿ ಜಾಹೀರಾತುಗಳಲ್ಲಿ ಸಿಎಂ, ಸಚಿವರ ಭಾವಚಿತ್ರ ಬಳಕೆಗೆ ಸುಪ್ರೀಂ ಅನುಮತಿ

Update: 2016-03-18 16:55 GMT

ಹೊಸದಿಲ್ಲಿ, ಮಾ.18: ಸರಕಾರಿ ಜಾಹೀರಾತುಗಳಲ್ಲಿ ರಾಜ್ಯಪಾಲರು, ಮುಖ್ಯಮಂತ್ರಿ ಹಾಗೂ ಸಚಿವರ ಭಾವಚಿತ್ರಗಳನ್ನು ಬಳಸಿಕೊಳ್ಳುವುದಕ್ಕೆ ಅನುಮತಿ ನೀಡುವ ಮೂಲಕ ಸುಪ್ರೀಂಕೋರ್ಟ್ ತನ್ನ 2015ರ ಆದೇಶವನ್ನು ಹಿಂಪಡೆದಿದೆ. ಮುಂದಿನ ತಿಂಗಳು ಐದು ರಾಜ್ಯಗಳು ವಿಧಾನಸಭಾ ಚುನಾವಣೆಗೆ ಸಿದ್ಧತೆಗಳು ಆರಂಭಗೊಳ್ಳಲಿರುವಂತೆಯೇ ಸರ್ವೋಚ್ಚ ನ್ಯಾಯಾಲಯು ಈ ಮಹತ್ವದ ಆದೇಶವನ್ನು ನೀಡಿದೆ.

ಸರಕಾರಿ ಜಾಹೀರಾತುಗಳಲ್ಲಿ ಕೇವಲ ಪ್ರಧಾನಿ, ರಾಷ್ಟ್ರಪತಿ ಹಾಗೂ ಮುಖ್ಯ ನ್ಯಾಯಮೂರ್ತಿಯವರ ಭಾವಚಿತ್ರಗಳನ್ನು ಮಾತ್ರವೇ ಬಳಸಬೇಕೆಂದು ಸುಪ್ರೀಂಕೋರ್ಟ್ 2015ರಲ್ಲಿ ನೀಡಿದ್ದ  ತೀರ್ಪಿನ ಮರುಪರಿಶೀಲನೆ ಕೋರಿ ಕೇಂದ್ರ ಹಾಗೂ ವಿವಿಧ ರಾಜ್ಯಗಳು ಸುಪ್ರೀಂಕೋರ್ಟ್‌ಗೆ ಅರ್ಜಿಗಳನ್ನು ಸಲ್ಲಿಸಿದ್ದವು.

ತನ್ನ ಜಾಹೀರಾತುಗಳಲ್ಲಿ ಯಾರ ಭಾವಚಿತ್ರಗಳನ್ನು ಪ್ರಕಟಿಸಬೇಕೆಂಬುದು ಹಾಗೂ ಜಾಹೀರಾತು ಯಾವ ವಿಷಯಗಳನ್ನು ಒಳಗೊಂಡಿರಬೇಕೆಂದು ನಿರ್ಧರಿಸುವುದು ಸರಕಾರಕ್ಕೆ ಸೇರಿದ್ದಾಗಿದೆ. ಇಂತಹ ನೀತಿ ವಿಷಯಗಳಲ್ಲಿ ನ್ಯಾಯಾಲಯ ಹಸ್ತಕ್ಷೇಪ ನಡೆಸಬಾರದೆಂದು ಕೇಂದ್ರ ಸರಕಾರ ತನ್ನ ಅರ್ಜಿಯಲ್ಲಿ ವಾದಿಸಿತ್ತು.ಜಾಹೀರಾತುಗಳಲ್ಲಿ ಮುಖ್ಯಮಂತ್ರಿಗಳ ಭಾವಚಿತ್ರಗಳನ್ನು ನಿಷೇಧಿಸುವುದು ದೇಶದ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆಯೆಂದು ಅದು ತಿಳಿಸಿತ್ತು.

ಸುಪ್ರೀಂಕೋರ್ಟ್ ಕಳೆದ ವರ್ಷ ನೀಡಿದ ಆದೇಶವೊಂದರಲ್ಲಿ, ಸರಕಾರದ ನೀತಿ ಹಾಗೂ ಸಾಧನೆಗಳ ಜೊತೆ ರಾಜಕಾರಣಿಗಳಿಗೆ ನಂಟು ಕಲ್ಪಿಸುವುದರಿಂದ ವ್ಯಕ್ತಿತ್ವದ ಪೂಜೆಯ ಬೆಳವಣಿಗೆಯಾಗುತ್ತದೆ. ಇದು ದೇಶದ ಪ್ರಜಾತಾಂತ್ರಿಕ ಕಾರ್ಯನಿರ್ವಹಣೆಗೆ ಮಾರಕವೆಂದು ಅಭಿಪ್ರಾಯಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News