9 ದೈತ್ಯ ನಕ್ಷತ್ರಗಳ ಪತ್ತೆ
Update: 2016-03-18 23:14 IST
ನ್ಯೂಯಾರ್ಕ್, ಮಾ. 18: ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡವೊಂದು ನಾಸಾ/ಇಎಸ್‌ಎ ಹಬಲ್ ಬಾಹ್ಯಾಕಾಶ ಟೆಲಿಸ್ಕೋಪ್‌ನ ಮೂಲಕ ನಕ್ಷತ್ರ ಸಮೂಹ ಆರ್136ರಲ್ಲಿ ಒಂಬತ್ತು ನೂತನ ದೈತ್ಯ ನಕ್ಷತ್ರಗಳನ್ನು ಪತ್ತೆಹಚ್ಚಿದೆ. ಈ ನಕ್ಷತ್ರಗಳ ದ್ರವ್ಯರಾಶಿ ನಮ್ಮ ಸೂರ್ಯನ ದ್ರವ್ಯರಾಶಿಗಿಂತ 100 ಪಟ್ಟಿಗಿಂತಲೂ ಅಧಿಕ.
ಆರ್136 ಕೆಲವೇ ಕೆಲವು ಜ್ಯೋತಿವರ್ಷಗಳಷ್ಟು ದೂರದಲ್ಲಿದೆ. ಈ ಯುವ ನಕ್ಷತ್ರ ಸಮೂಹದಲ್ಲಿ ಹಲವು ಅತ್ಯಂತ ಬೃಹತ್, ಬಿಸಿ ಮತ್ತು ಮಿನುಗುವ ತಾರೆಗಳಿವೆ. ಅವುಗಳ ಶಕ್ತಿ ಹೆಚ್ಚಾಗಿ ಅತಿನೇರಳೆ ವಿಧಾನದಲ್ಲಿ ಪ್ರಸಾರವಾಗುತ್ತದೆ ಎಂದು ಬುಧವಾರ ಸಲ್ಲಿಸಿದ ತನ್ನ ವರದಿಯಲ್ಲಿ ನಾಸಾ ಹೇಳಿದೆ.
ಹೊಸದಾಗಿ ಪತ್ತೆಯಾದ ನಕ್ಷತ್ರಗಳು ಅತಿ ಬೃಹತ್ತಾಗಿರುವುದು ಮಾತ್ರವಲ್ಲ, ಅತಿ ಪ್ರಕಾಶಮಾನವಾಗಿಯೂ ಇದೆ. ಈ ಒಂಬತ್ತು ನಕ್ಷತ್ರಗಳು ಜೊತೆಯಾದರೆ ಸೂರ್ಯನಿಗಿಂತ ಮೂರು ಕೋಟಿ ಪಟ್ಟು ಪ್ರಕಾಶಮಾನವಾಗುತ್ತವೆ.