ಪ್ಯಾರಿಸ್ ದಾಳಿಯ ಶಂಕಿತ ರೂವಾರಿ ಸೆರೆ
ರಸೆಲ್ಸ್, ಮಾ. 19: ಪ್ಯಾರಿಸ್ ಸರಣಿ ಭಯೋತ್ಪಾದಕ ದಾಳಿಗಳ ಶಂಕಿತ ರೂವಾರಿ, ಯುರೋಪ್‌ನ ‘ಮೋಸ್ಟ್ ವಾಂಟಡ್’ ಅಬ್ದುಸ್ಸಲಾಂನನ್ನು ಬ್ರಸೆಲ್ಸ್‌ನಲ್ಲಿ ಇಂದು ನಡೆದ ಬೃಹತ್ ಕಾರ್ಯಾಚರಣೆಯೊಂದರಲ್ಲಿ ಸೆರೆಹಿಡಿಯಲಾಗಿದೆ.
ಸಶಸ್ತ್ರ ಪಡೆಗಳ ಕಾರ್ಯಾಚರಣೆಯ ವೇಳೆ ಆತನ ಕಾಲಿಗೆ ಗಾಯವಾಗಿದೆ. 26 ವರ್ಷದ ಅಬ್ದುಸ್ಸಲಾಂ ಕಳೆದ ವರ್ಷ ನವೆಂಬರ್ 13ರಂದು ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಪ್ರಧಾನ ಪಾತ್ರ ವಹಿಸಿದ್ದಾನೆಂದು ನಂಬಲಾಗಿದೆ. ಆ ದಾಳಿಯಲ್ಲಿ 130 ಮಂದಿ ಪ್ರಾಣ ಕಳೆದುಕೊಂಡಿದ್ದರು. ದಾಳಿಯ ಹೊಣೆಯನ್ನು ಐಸಿಸ್ ಹೊತ್ತುಕೊಂಡಿತ್ತು. ಫ್ರೆಂಚ್ ನೆಲದಲ್ಲಿ ಅತ್ಯಂತ ಭೀಕರ ಭಯೋತ್ಪಾದಕ ದಾಳಿ ನಡೆಸಿದ 10 ಮಂದಿಯ ತಂಡದ ಕೊನೆಯ ಬದುಕುಳಿದಿರುವ ಸದಸ್ಯ ಈತ ಎನ್ನಲಾಗಿದೆ.
ದಾಳಿ ನಡೆಸಿದ ಬಳಿಕ ತನ್ನನ್ನು ತಾನು ಸ್ಫೋಟಿಸಿಕೊಳ್ಳಲು ನಿರಾಕರಿಸಿದ ಆತ ಬ್ರಸೆಲ್ಸ್‌ಗೆ ಪಲಾಯನ ಮಾಡಿದ್ದ ಎನ್ನಲಾಗಿದೆ.
ಭಯೋತ್ಪಾದಕ ದಾಳಿ ನಡೆದ ಬಳಿಕ ನಾಲ್ಕು ತಿಂಗಳುಗಳ ಕಾಲ ಆತ ತಲೆಮರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ.