ನೀರನ್ನು ಉಳಿಸಲು ಮತ್ತು ಬಹುಬೆಳೆ ಪದ್ಧತಿ ಅನುಸರಿಸುವಂತೆ ರೈತರಿಗೆ ಪ್ರಧಾನಿ ಕರೆ
ಹೊಸದಿಲ್ಲಿ,ಮಾ.19: ಸತತ ಬರಗಾಲದಿಂದಾಗಿ ಕೃಷಿ ಇಳುವರಿಯು ಕುಂಠಿತಗೊಂಡಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಲ ಸಂರಕ್ಷಣೆ ಕ್ರಮಗಳಿಗೆ ಕರೆ ನೀಡಿದರಲ್ಲದೆ ಬಹುಬೆಳೆ ಪದ್ಧತಿಯ ಮೇಲೆ ಗಮನ ಕೇಂದ್ರೀಕರಿಸುವಂತೆ ಮತ್ತು ಹೈನುಗಾರಿಕೆ, ಕೋಳಿ ಸಾಕಣೆ ಮತ್ತು ಆಹಾರ ಸಂಸ್ಕರಣೆಯಂತಹ ಕೃಷಿ ಪೂರಕ ಚಟುವಟಿಕೆಗಳನ್ನು ಕೈಗೊಳ್ಳುವಂತೆ ರೈತರಿಗೆ ಸೂಚಿಸಿದರು.
ಶನಿವಾರ ಇಲ್ಲಿ ಮೂರು ದಿನಗಳ ಕೃಷಿ ಉನ್ನತಿ ಮೇಳವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, 2014 ಮೇ ತಿಂಗಳಿನಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ತನ್ನ ಸರಕಾರವು ನೂತನ ಬೆಳೆ ವಿಮೆ ಯೋಜನೆ ಮತ್ತು ರೈತರಿಗೆ ಮಣ್ಣು ಆರೋಗ್ಯ ಕಾರ್ಡ್ ಗಳ ವಿತರಣೆ ಸೇರಿದಂತೆ ಕೃಷಿ ಪ್ರಗತಿಗಾಗಿ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ, 2022ರ ವೇಳೆಗೆ ರೈತರ ಆದಾಯವನ್ನು ಇಮ್ಮಡಿಗೊಳಿಸುವುದು ಸರಕಾರದ ಉದ್ದೇಶವಾಗಿದೆ ಎಂದು ಹೇಳಿದರು.
ಸಾಕಷ್ಟು ನೀರು ಮತ್ತು ಫಲವತ್ತಾದ ಭೂಮಿಯನ್ನು ಹೊಂದಿರುವ ಪೂರ್ವ ಭಾಗದ ರಾಜ್ಯಗಳಲ್ಲಿ ಆಧುನಿಕ ತಂತ್ರ ಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಎರಡನೆ ಹಸಿರು ಕ್ರಾಂತಿಗೂ ಅವರು ಕರೆಯನ್ನು ನೀಡಿದರು.
ಕೃಷಿ ಇಳುವರಿ ಮತ್ತು ಆದಾಯವನ್ನು ಹೆಚ್ಚಿಸಲು ಜಲ ಸಂರಕ್ಷಣೆಗೆ ಒತ್ತು ನೀಡಿದ ಅವರು, ನನೆಗುದಿಗೆ ಬಿದ್ದಿರುವ 90 ನೀರಾವರಿ ಯೋಜನೆಗಳನ್ನು ಗುರುತಿಸಿರುವ ತನ್ನ ಸರಕಾರವು ಅವುಗಳ ಪುನಶ್ಚೇತನಕ್ಕೆ ನಿರ್ಧರಿಸಿದೆ. ಇದರಿಂದ 80 ಲಕ್ಷ ಹೆಕ್ಟೇರ್ ಜಮೀನಿಗೆ ನೀರಾವರಿ ಸೌಲಭ್ಯ ದೊರೆಯಲಿದೆ. ನೀರಾವರಿ ಯೋಜನೆಗಳಿಗಾಗಿ ಸರಕಾರವು 20,000 ಕೋಟಿ ರೂ.ಗಳನ್ನು ವ್ಯಯಿಸುತ್ತಿದೆ ಎಂದು ಹೇಳಿದರು.
ಈ ಬೇಸಿಗೆಯಲ್ಲಿ ನರೇಗಾ ನಿಧಿಯನ್ನು ಜಲ ಸಂರಕ್ಷಣೆಗಾಗಿ ಕೆರೆಗಳಂತಹ ಸಾರ್ವಜನಿಕ ಆಸ್ತಿ ನಿರ್ಮಾಣಕ್ಕೆ ಬಳಕೆ ಮಾಡಲಾಗುವುದು ಎಂದರು.
ಉತ್ಪಾದನಾ ವೆಚ್ಚ ಕಡಿತ ಮತ್ತು ರೈತರ ಆದಾಯ ಏರಿಕೆಗಾಗಿ ಕಿರು ಮತ್ತು ಹನಿ ನೀರಾವರಿ ಮತ್ತು ದ್ರವ ರಸಗೊಬ್ಬರ ಬಳಕೆಗೆ ಒತ್ತು ನೀಡಿದ ಅವರು,ಜಲ ಕೊಯ್ಲಿಗೆ ಜಲ ಸಂರಕ್ಷಣೆಯಷ್ಟೇ ಮಹತ್ವವಿದೆ. ನೀರನ್ನು ಪೋಲು ಮಾಡುವ ಹಕ್ಕು ನಮಗಿಲ್ಲ. ಪ್ರತಿ ಹನಿ ನೀರಿಗೂ ಹೆಚ್ಚು ಬೆಳೆ ಬೆಳೆಯುವ ಮೂಲಕ ನಾವು ನೀರಿನ ಮಿತವ್ಯಯವನ್ನು ಸಾಧಿಸಬಹುದಾಗಿದೆ ಎಂದರು.